Breaking News
Home / ಬೆಳಗಾವಿ / ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ವಿಶ್ವ ಯೋಗ ದಿನಾಚರಣೆ

ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ವಿಶ್ವ ಯೋಗ ದಿನಾಚರಣೆ

Spread the love

 

ಮೂಡಲಗಿ: ಯೋಗವು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಪ್ರಗತಿಗೆ ಹಾದಿ ಮಾಡುವ ಪ್ರಾಚೀನ ಭಾರತೀಯ ಶಿಸ್ತಿನ ಮಾರ್ಗವಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಪಟ್ಟಣದ ಆರ್.ಡಿ.ಎಸ್. ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರದಂದು ಜರುಗಿದ ೧೧ ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಹ, ಮನಸ್ಸು ಹಾಗೂ ಆತ್ಮದ ಮಧ್ಯೆ ಸಮತೋಲನ ಸಾಧಿಸುವುದೇ ಯೋಗ ಎಂದು ಹೇಳಿದರು.
ಯೋಗವು ಮಾನವ ಜೀವನದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗಿದೆ. ದಿನನಿತ್ಯದ ಜೀವನದಲ್ಲಿ ಶಾಂತಿ ಮತ್ತು ಸಮತೋಲನ, ಕೆಲಸದೊತ್ತಡ, ಆತಂಕ ನಿವಾರಣೆಗೆ
ಸಹಾಯಕವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರತನಕ ಯೋಗವನ್ನು ಮಾಡಬಹುದಾಗಿದೆ. ಇದರಿಂದ ಶಾರೀರಿಕ, ಶಕ್ತಿ ವರ್ಧನೆ, ರೋಗ ನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ. ರಕ್ತ ಸಂಚಾರ ಸುಧಾರಣೆಗೂ ಯೋಗವು ಅನುಕೂಲವಾಗುತ್ತದೆ ಎಂದು ತಿಳಿಸಿದರು.


ವರ್ಷದ ಜೂನ್ ತಿಂಗಳ ೨೧ ರಂದು ದೀರ್ಘ ದಿನವಾಗಿದ್ದರಿಂದ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಳೆದ ೧೦ ವರ್ಷಗಳಿಂದ ಇದು ನಡೆಯುತ್ತ ಬಂದಿದ್ದು, ಈಗ ಹನ್ನೊಂದನೇ ವರ್ಷಕ್ಕೆ ಕಾಲಿರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಯೋಗ ದಿನಕ್ಕೆ ಮತ್ತಷ್ಟು ಕಳೆ ಬಂದಂತಾಗಿದೆ. ಋಷಿ- ಮುನಿಗಳ ಕಾಲದಿಂದಲೂ ಯೋಗಕ್ಕೆ ಅತೀ ಮಹತ್ವ ಸ್ಥಾನ ಪಡೆದಿದೆ. ಯೋಗವು ಹುಟ್ಟಿರುವುದೇ ನಮ್ಮ ಭಾರತದಿಂದ. ಸನಾತನ ಕಾಲದಿಂದಲೂ ಇದು ಮುಂದುವರೆದಿದೆ. ಇಂದು ಜಾಗತೀಕವಾಗಿ ಯೋಗಕ್ಕೆ ಮಹತ್ವ ಬಂದಿರುವುದಾದರೆ ಅದು ನಮ್ಮ ಹೆಮ್ಮೆಯ ಭಾರತದಿಂದ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಮೂಡಲಗಿ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಅತೀ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಯೋಗಾಸಕ್ತರ ಇಚ್ಛೆಯ ಹಿನ್ನೆಲೆಯಲ್ಲಿ ಮೂಡಲಗಿಯಲ್ಲಿ ಸಮಸ್ತ ನಾಗರೀಕರು ಮತ್ತು ಅಧಿಕಾರಿಗಳ ಸಹಕಾರದಿಂದ ಆಚರಿಸಲು ನಿರ್ಣಯ ಮಾಡಲಾಯಿತು. ಇಲ್ಲಿನ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸುವ ಮೂಲಕ ಯೋಗ ದಿನವನ್ನು ಹಬ್ಬದಂತೆಯೇ ನಡೆಸಿ ಕೊಟ್ಟರು. ಅದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಪಟ್ಟಣದ ಸಂತೋಷ ಪಾರ್ಶಿಯವರಿಗೆ ಸೇರಿದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ ಬೆಳಿಗ್ಗೆ ೬.೩೦ ಗಂಟೆಯಿಂದ ೮.೦೦ ಗಂಟೆಯ ತನಕ ಸಾರ್ವಜನಿಕರು ಭಾಗವಹಿಸಿ ಯೋಗಾಭ್ಯಾಸ ಮಾಡಿದರು.
ಪುರಸಭೆ ಸದಸ್ಯರು, ಸಹಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಯುವಕರು, ಯುವತಿಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ಯೋಗಾಸನ, ಪ್ರಾಣಾಯಾಮ ಮಾಡುತ್ತ ಯೋಗ ದಿನಕ್ಕೆ ಶುಭ ಕೋರಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮುಂದಾಳತ್ವದಲ್ಲಿ ಯೋಗ ದಿನಾಚರಣೆಯನ್ನು ಅತೀ ಶಿಸ್ತು ಬದ್ಧವಾಗಿ ನಡೆಸಲಾಯಿತು.
ಪಟ್ಟಣದ ಶಿವಬೋಧರಂಗ ಮಠದ ಪೀಠಾಧಿಪತಿ ಅಮೃತ ಬೋಧ ಮಹಾ ಸ್ವಾಮಿಗಳು ಮತ್ತು ಬಾಲಚಂದ್ರ ಜಾರಕಿಹೊಳಿಯವರು ಸಸಿಗೆ ನೀರುಣಿಸುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಯೋಗಾಸಕ್ತರೊಂದಿಗೆ ಬೆರೆತು ವಿವಿಧ ಆಸನಗಳನ್ನು ಮಾಡಿದರು.
ಬಿಜೆಪಿ (ಗ್ರಾ) ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ತಹಶೀಲ್ದಾರ ಶಿವಾನಂದ ಬಬಲಿ,
ಆರ್.ಡಿ.ಎಸ್. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಂತೋಷ ಪಾರ್ಶಿ,ತಾ.ಪಂ. ಇಓ ಎಫ್.ಜಿ. ಚಿನ್ನನ್ನವರ, ಬಿಇಓ ಎ.ಸಿ.ಮನ್ನಿಕೇರಿ, ಸಿಡಿಪಿಓ ಯಲ್ಲಪ್ಪ ಗದಾಡಿ, ಮೂಡಲಗಿ ಪಿಐ ಶ್ರೀಶೈಲ ಬ್ಯಾಕೋಡ, ಘಟಪ್ರಭಾ ಪಿಐ ಹೆಚ್.ಡಿ.ಮುಲ್ಲಾ, ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಮುಖ್ಯಾಧಿಕಾರಿ ತುಕಾರಾಮ ಮಾದರ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಅನೇಕ ಗಣ್ಯರು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು,
ಪೌರ ಕಾರ್ಮಿಕರು, ಸಾಹಿತಿಗಳು- ಪತ್ರಕರ್ತರು, ವಿವಿಧ ಸಮುದಾಯಗಳ ಗಣ್ಯರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಲ್ಲೊಳಿಯ ಸ್ಥಿತ ಪ್ರಜ್ಞ ಫೌಂಡೇಶನ್ ನ ಆನಂದ‌ ಚಿಕ್ಕೋಡಿ ಮತ್ತವರ ತಂಡದವರು ಯೋಗದ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಯೋಗ ಪಟು ಬಳೋಬಾಳ ಗ್ರಾಮದ ಕುಮಾರಿ ಬಡವಣ್ಣಿ ಅವಳು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಳು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ