*ತಪಸಿ ಹಾಗೂ ಗೋಸಬಾಳ ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನೆ ಸಲ್ಲಿಕೆ*
*ಗೋಕಾಕ* ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ ಎರಡೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ಮನವಿಯ ಮೇರೆಗೆ ಮೂಡಲಗಿ ವಲಯದಲ್ಲಿರುವ ತಪಸಿ ಮತ್ತು ಗೋಸಬಾಳ ಶಾಲೆಗಳು ಹೊಸ ಪ್ರೌಢ ಶಾಲೆಗಳಾಗಿ ಉನ್ನತೀಕರಣಗೊಂಡಿವೆ ಎಂದು ಹೇಳಿರುವ ಅವರು, ಇದರಿಂದ ಮೂಡಲಗಿ ವಲಯದಲ್ಲಿ ಒಟ್ಟು 36 ಸರಕಾರಿ ಪ್ರೌಢ ಶಾಲೆಗಳು ಆರಂಭವಾದಂತಾಗಿದೆ. ತಾವು ಶಾಸಕರಾಗುವುದಕ್ಕಿಂತ ಪೂರ್ವ 13 ಸರಕಾರಿ ಪ್ರೌಢ ಶಾಲೆಗಳನ್ನು ಹೊಂದಿದ್ದ ಮೂಡಲಗಿ ವಲಯವು ನಂತರ 2004 ರಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಇಲ್ಲಿಯವರೆಗೆ 23 ಹೊಸ ಸರಕಾರಿ ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ತಪಸಿ ಮತ್ತು ಗೋಸಬಾಳ ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ತಪಸಿ ಹಾಗೂ ಗೋಸಬಾಳ ಗ್ರಾಮಗಳಿಗೆ ಹೊಸ ಸರಕಾರಿ ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸುವಲ್ಲಿ ಶ್ರಮಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.