ತಪಸಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಗಾಗಲೇ ತಪಸಿ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಗೋಕಾಕ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ಗೋಕಾಕ ತಾಲೂಕಿನ ತಪಸಿ ಗ್ರಾಮದಲ್ಲಿ ಫೆ.8ರಂದು ನಡೆದ ರಾಷ್ಟ್ರೀಯ ಜಲಜೀವನ ಮಿಷನ್ ಮತ್ತು ಎಲ್‍ಎಂಎಂ ಯೋಜನೆಯ ಅನುದಾನದಡಿಯಲ್ಲಿ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶದಲ್ಲಿ ಸ್ಥಳೀಯರ ಮೂಲಭೂತ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು ಎಂದರು.
ರಾಷ್ಟ್ರೀಯ ಜಲಜೀವನ ಮಿಷನ್ ಮತ್ತು ಎಲ್‍ಎಂಎಂ ಯೋಜನೆಯ ಸುಮಾರು 2 ಕೋಟಿ 70 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣ, ಪೈಪಲೈನ್ ಹಾಗೂ ತಪಸಿ ಗ್ರಾಮದ ಪ್ರತಿ ಮನೆಗೆ ನಳದ ವ್ಯವಸ್ಥೆ ಮೂಲಕ ಕುಡಿಯುವ ನೀರು ಸರಬರಾಜು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗೋಕಾಕ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಐ.ಎಮ್.ದಪ್ಪೆದಾರ ತಿಳಿಸಿದ್ದಾರೆ.
ತಪಸಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಬಳಿಕ ಗ್ರಾಮಸ್ಥರಿಂದ ಯುವನಾಯಕ ಸರ್ವೋತ್ತಮ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಗ್ರಾಪಂ ಸದಸ್ಯರಾದ ವಸಂತರಾವ ಗಲಗಲಿ, ಹನುಮಂತ ಪೂಜೇರಿ, ಲಕ್ಷ್ಮಣ ಹರಿಜನ, ಹನುಮಂತ ಮಲ್ದೂರ, ಲಕ್ಷ್ಮಣ ಅರಬನ್ನವರ, ಪ್ರಕಾಶ ಸಿದ್ದಣ್ಣವರ, ಯಮನಪ್ಪ ವಾಳದ, ಮುತ್ತೆಪ್ಪ ದೇಮನ್ನವರ, ಶಿವಾನಂದ ಮಾಡಮಗೇರಿ, ಗ್ರಾಮದ ಮುಖಂಡರಾದ ರಾಯಪ್ಪ ತಿರಕನ್ನವರ, ಯಲ್ಲಪ್ಪ ಸುಳ್ಳನ್ನವರ, ಸಿದ್ದನಗೌಡ ಪಾಟೀಲ, ಗುರುನಾಥ ಕುರೇರ, ಬಸಪ್ಪ ಪೂಜೇರಿ, ಗುರುನಾಥ ಪೊಲೀಸನ್ನವರ, ಬಸಪ್ಪ ಬಣಜಿಗೇರ, ಗುತ್ತಿಗೆದಾರ ರಂಗಪ್ಪ ನಂದಿ, ಕಲ್ಲಯ್ಯ ವಡೇರ, ಹನುಮಂತ ಮನ್ನಾಪೂರ, ಸ್ಥಳೀಯರು, ಇತರರು ಇದ್ದರು.