ಮೂಡಲಗಿಯ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾಭವನದಲ್ಲಿ ಗುರುವಾರ ಜರುಗಿದ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ತರಬೇತಿ ಶಿಬಿರವನ್ನು ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಉದ್ಘಾಟಿಸಿದರು.
‘ಹೊಸ ಕಾನೂನು, ತಿದ್ದುಪಡಿಗಳನ್ನು ಸಹಕಾರ ಸಂಘಗಳು ಅನುಸರಿಸಬೇಕು’
ಮೂಡಲಗಿ: ‘ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕರು ಸಹಕಾರ ಇಲಾಖೆಯು ಮಾರ್ಪಡಿಸುವ ತಿದ್ದುಪಡಿಗಳು ಹಾಗೂ ಬದಲಾದ ಕಾನೂನು ಅನ್ವಯ ಸಂಘ, ಸಂಸ್ಥೆಗಳನ್ನು ನಿರ್ವಹಿಸಬೇಕು’ ಎಂದು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವರ್ಧಮಾನ ಬೋಳಿ ಹೇಳಿದರು.
ಇಲ್ಲಿಯ ಶ್ರೀ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಮೂಡಲಗಿ ಪಟ್ಟಣ ಸಹಕಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಗೋಕಾಕ ಮತ್ತು ಮೂಡಲಗಿ ತಲ್ಲೂಕಿನ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಘ, ಸಂಸ್ಥೆಗಳು ವ್ಯವಸ್ಥಿತವಾಗಿ ನಡೆಯಲು ಮತ್ತು ಪ್ರಗತಿಯನ್ನು ಹೊಂದಲು ಆಡಳಿತ ಮಂಡಳಿಯಷ್ಟೆ ಸಿಬ್ಬಂದಿಯವರ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಮತ್ತು ಸಿಬ್ಬಂದಿಯವರಿಗೆ ತರಬೇತಿ ನೀಡುವುದರಿಂದ ಸಂಘಗಳು ವ್ಯವಸ್ಥಿತವಾಗಿ ನಡೆಯಲು ಸಹಕಾರವಾಗುತ್ತದೆ ಮತ್ತು ಬದಲಾದ ನಿಯಮಗಳ ಬಗ್ಗೆ ಅರಿವು ಮೂಡುತ್ತದೆ’ ಎಂದರು.
ತರಬೇತಿಯಲ್ಲಿ ಬೆಳಗಾವಿ-ರಾಯಭಾಗದ ಸಹಕಾರ ಅಭಿವೃದ್ಧಿ ಅಧಿಕಾರಿ ಶಂಕರ ಕರಬಸನ್ನವರ ‘ಸಹಕಾರ ಸಂಘಗಳ ಕಾಯ್ದೆಯ ಅಂಶಗಳ ಇತ್ತೀಚಿನ ತಿದ್ದುಪಡಿಗಳು’ ಕುರಿತು, ಲೆಕ್ಕಪರಿಶೋಧಕ ಎಸ್.ಬಿ. ಗದಾಡಿ ಅವರು ‘ಸಹಕಾರಿ ಸಂಘಗಳಿಗೆ ಅನ್ವಯಿಸುವ ಆದಾಯ ತೆರಿಗೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಚೈತನ್ಯ ಸೊಸಾಯಿಟಿ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಬಿಜಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಸಮಾರಂಭದ ವೇದಿಕೆಯಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸನಗೌಡ ಪಾಟೀಲ, ನಿರ್ದೇಶಕ ಗುರುನಾಥ ಕಂಕಣವಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ತಮ್ಮಣ ಕೆಂಚರಡ್ಡಿ, ಬಸವೇಶ್ವರ ಅರ್ಬನ್ ಕೋ-ಆಪ್ ಸೊಸಾಯಿಟಿ ಅಧ್ಯಕ್ಷ ಬಸವರಾಜ ತೇಲಿ, ನಿರ್ದೇಶಕ ಶ್ರೀಕಾಂತ ಹಿರೇಮಠ, ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಉಪಸ್ಥಿತರಿದರು.
ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಜಗ್ಗಿನವರ ನಿರೂಪಿಸಿ ಸ್ವಾಗತಿಸಿದರು. ಕಲ್ಲೋಳಿ ಬಸವೇಶ್ವರ ಸೌಹಾರ್ದ ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ಹನಮಂತ ಖಾನಗೌಡ್ರ ವಂದಿಸಿದರು.