ಬೆಟಗೇರಿಯಲ್ಲಿ ಇನ್ನೂ 4 ಮಂಗಳವಾರ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಪ್ರಥಮ ಮಂಗಳವಾರ ವಾರದ ದಿನ ಜೂ.20 ರಂದು ಸಂಜೆ6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವ ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದ್ದವು.
ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಮಂಗಳವಾರ ಜೂ.20 ಸೇರಿದಂತೆ ಮುಂದೆ ಬರುವ ವಾರದ ಪ್ರತಿ ಮಂಗಳವಾರ ಜು.27, ಜು.4, ಜು.11, ಜು.18 ರಂದು ಒಟ್ಟು ಐದು ಮಂಗಳವಾರ ದಿನವನ್ನು ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.
ಕಟ್ಟಾ ವಾರ ಆಚರಣೆ : ಬೆಟಗೇರಿ ಗ್ರಾಮದ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದರಿಂದ ವಾರದ ಮಂಗಳವಾರ ಒಂದು ದಿನ, ಒಟ್ಟು 5 ಮಂಗಳವಾರ ದಿನ ಇಡೀ ಗ್ರಾಮದ ರೈತರ್ಯಾರೂ ವಾರದ ಈ 5 ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು. ಹೀಗಾಗಿ ಇನ್ನೂ 4 ಮಂಗಳವಾರ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.
ಸದಾಶಿವ ಕುರಿ, ಲಕ್ಷ್ಮಣ ಸೋಮಗೌಡ್ರ, ಗುರಪ್ಪ ಮಾಕಾಳಿ, ಬಸು ಕೆಂಪನಿಂಗಪ್ಪಗೋಳ, ಪ್ರಕಾಶ ಗುಡದಾರ, ಮುದಕಪ್ಪ ಚಂದರಗಿ, ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು ಇದ್ದರು.