ಉಗ್ರಸ್ವರೂಪಿ ವೀರಭದ್ರೇಶ್ವರರು ಜಗದ ಉದ್ಧಾರಕ್ಕೆ ಅವತರಿಸಿದರು: ಈರಯ್ಯ ಹಿರೇಮಠ
ಬೆಟಗೇರಿ: ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆ ಪೌರಾಣಿಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸೆ.18ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು.
ಶೈವರು ಮಾತ್ರವಲ್ಲದೇ ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ವೀರಗಾಸೆಯ ಮೂಲಕ ವೀರಭದ್ರನ ಚರಿತ್ರೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಈರಯ್ಯ ಹಿರೇಮಠ ಅಭಿಪ್ರಾಯಿಸಿದರು.
ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಸಂಗಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ವೀರಭದ್ರೇಶ್ವರರ ಗದ್ಗುಗೆಗೆ ರುದ್ರಾಭಿಷೇಕ ಮತ್ತು ಭಾವಚಿತ್ರಕ್ಕೆ ಮಹಾಪೂಜೆ, ಸುಮಂಗಲೆಯರಿಂದ ನೈವೇದ್ಯ ಸಮರ್ಪನೆ, ದೀಪೋತ್ಸವ, ಪುರವಂತರಿಂದ ಒಡಪು ಹೇಳುವದು, ಮಹಾಮಂಗಲದೊಂದಿಗೆ ವೀರಭದ್ರೇಶ್ವರ ಜಯಂತ್ಯೋತ್ಸವ ಜರುಗಿತು.
ಸ್ಥಳೀಯ ಹರ, ಗುರು, ಚರಮೂರ್ತಿಗಳು, ಗಣ್ಯರು, ವೀರಭದ್ರಸ್ವಾಮಿ ಪುರವಂತರು, ಮಹಿಳೆಯರು, ಬೆಟಗೇರಿ ಗ್ರಾಮದ ವೀರಭದ್ರೇಶ್ವರ ಜಯಂತ್ಯೋತ್ಸವ ಸೇವಾ ಸಮಿತಿ, ಅಧ್ಯಕ್ಷರು, ಸದಸ್ಯರು, ಎಲ್ಲ ಸಮುದಾಯದ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು, ಭಕ್ತರು ಇದ್ದರು.