ಮೂಡಲಗಿ: ದೇಶದ ನಾಳಿನ ಭವಿಷ್ಯವಾಗಿರುವ ಶಾಲೆ-ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಬಹು ಮುಖ್ಯವಾಗಿದೆ ಎಂದು ನ್ಯಾಯವಾದಿ ಎಮ್.ಬಿ. ಭಾಗೋಜಿ ಹೇಳಿದರು.
ಇಲ್ಲಿಯ ಚಂದ್ರಿಕಾ ವಸತಿ ಶಾಲೆಯಲ್ಲಿ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಕಾನೂನು ಅರಿತು ಮುನ್ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು. ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ. ಆದ್ದರಿಂದ ಪಠ್ಯದ ಜತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗಿದೆ ಎಂದರು.
ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷೆ ಎ.ಎಚ್ ಗೊಡ್ಯಾಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಗ್ರಾಮೀಣ ಭಾಗದ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಸಾಕ್ಷರತಾ ಕಾರ್ಯಕ್ರಮ ನಡೆಸಲಾಗಿದೆ. ಇದರಿಂದ ಮಕ್ಕಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಲಿದ್ದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಇಳಿಮುಖವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮಿ ರೇಳೆಕರ, ಖಜಾಂಚಿ ಪ್ರಿಯಾಂಕಾ ಗಜಕೋಶ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಕೆಂಪಣ್ಣ ಹುಕ್ಕೇರಿ ನಿರೂಪಿಸಿದರು.
