ರಾಜಾಪೂರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ
ಒಗ್ಗಟ್ಟಿನ ಮಂತ್ರ ಜಪಿಸಿ ಅಭಿವೃದ್ಧಿಗೆ ನಾಂದಿ ಹಾಡಿದ ಗ್ರಾಮಸ್ಥರು : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ
ಮೂಡಲಗಿ : ಗ್ರಾಮದ ಹಿರಿಯರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ಧಿಯನ್ನು ಕೈಗೊಂಡು ರಾಜಾಪೂರ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಿರುವುದು ಶ್ಲಾಘನೀಯವಾಗಿದೆ. ಒಗ್ಗಟ್ಟಿನ ಮೂಲಕ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ಹಿರಿಯರು ಹಾಗೂ ಗ್ರಾಪಂ ಸದಸ್ಯರು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.
ಸನ್ 2022-23ನೇ ಸಾಲಿನ ರಾಜಾಪೂರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದರ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಗೌರವ ಅರ್ಪಣೆ ಮಾಡಿ ಸತ್ಕರಿಸಿದರು.
ರಾಜಾಪೂರ ಗ್ರಾಮ ಪಂಚಾಯತಿ ಗಾಂಧಿ ಗ್ರಾಮ ಪ್ರಶಸ್ತಿಗೆ ಪಾತ್ರವಾಗಿರುವುದು ಇತರೇ ಗ್ರಾಮ ಪಂಚಾಯತಿಗಳು ರಾಜಾಪೂರ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು.
ಗ್ರಾಮದ ಜನತೆಗೆ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ನೀಗಿಸುವಲ್ಲಿ ಶ್ರಮಿಸಬೇಕು. ಕುಡಿಯುವ ನೀರು, ಒಳಚರಂಡಿ, ರಸ್ತೆ, ಬೀದಿ ದೀಪ, ಶೌಚಾಲಯ ಮುಂತಾದ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ನೀಡುವುದರ ಜೊತೆಗೆ ಸರ್ಕಾರದ ಅನೇಕ ಸೌಲಭ್ಯಗಳನ್ನು ಇಲ್ಲಿನ ಗ್ರಾಮ ಪಂಚಾಯತಿಯವರು ಜನರಿಗೆ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇಲ್ಲಿರುವ ಹಿರಿಯರು ಸದಾ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ರಾಜಾಪೂರ ಗ್ರಾಮದ ಅಭಿವೃದ್ಧಿಗೆ ಟೊಂಕುಕಟ್ಟಿ ನಿಂತಿದ್ದಾರೆ. ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆಗಳನ್ನು ಹಿರಿಯರು ಪರಿಹರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರ ಸಮಾಜಮುಖಿ ಕಾರ್ಯಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘಿಸಿದರು.
ಗ್ರಾಮ ಪಂಚಾಯತಿಗಳ ಕಾರ್ಯ ಸಾಧನೆಗಳನ್ನು ಗಮನಿಸಿ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಒಂದೊಂದು ಗಾಂಧಿ ಗ್ರಾಮ ಪುರಸ್ಕಾರಗಳನ್ನು ನೀಡುತ್ತ ಬರುತ್ತಿದೆ. 2022-23ನೇ ಸಾಲಿನ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮ ಪಂಚಾಯತಿ ಹಾಗೂ ಮೂಡಲಗಿ ತಾಲೂಕಿನಿಂದ ರಾಜಾಪೂರ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧೀಜಿ ಜಯಂತಿಯಂದು ಆಯಾ ಗ್ರಾಮ ಪಂಚಾಯತಿಗಳಿಗೆ ಸರ್ಕಾರ ಪುರಸ್ಕಾರ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಭೈರಪ್ಪ ಯಕ್ಕುಂಡಿ, ಶಿವಾನಂದ ಕಮತಿ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೊಳ್ಳಿ, ಕೆಂಪಣ್ಣಾ ಗಡಹಿಂಗ್ಲಜ್, ವಾಸಪ್ಪ ಪಂಡ್ರೊಳ್ಳಿ, ನಾಗಪ್ಪ ಕಟ್ಟಿಕಾರ, ಮಹಾದೇವ ವಗ್ಗ, ಗ್ರಾಪಂ ಪಿಡಿಓ ಉದಯಕುಮಾರ ಬೆಳ್ಳುಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.