Breaking News
Home / Recent Posts / ಹೊಸಟ್ಟಿಯಲ್ಲಿ ಜರುಗಿದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ

ಹೊಸಟ್ಟಿಯಲ್ಲಿ ಜರುಗಿದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ

Spread the love

ಮೂಡಲಗಿ: ಸಮಾಜದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ತಮ್ಮ ಕಲಿಕೆಯಿಂದ ಇಡೀ ಜಗತ್ತನ್ನೇ ಬದಲಾಯಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಗುರುವಾರದಂದು ತಾಲ್ಲೂಕಿನ ಹೊಸಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಡಾ. ಎಸ್.ರಾಧಾಕೃಷ್ಣನ್ ಜನ್ಮ ದಿನಾಚರಣೆ ಮತ್ತು

ಮೂಡಲಗಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವ್ಯ ಭಾರತದ ನಿರ್ಮಾಣದಲ್ಲಿ ಶಿಕ್ಷಕರು ಅಮೂಲ್ಯ ಪಾತ್ರ ವಹಿಸುವರು ಎಂದು ತಿಳಿಸಿದರು.
ಅರಭಾವಿ ಕ್ಷೇತ್ರದ ಶಾಸಕನಾಗಿ ೨೦ ವರ್ಷ ೩ ತಿಂಗಳಾಯಿತು. ಯಾವಾಗ ಈ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇನೋ ಅಂದಿನಿಂದ ಇಲ್ಲಿಯತನಕ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತ ಬಂದಿದ್ದೇನೆ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದ್ದರ ನಿಮಿತ್ಯ ಇಂದು ಮೂಡಲಗಿ ಶೈಕ್ಷಣಿಕ ವಲಯವು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ. ಶಿಕ್ಷಣವೊಂದೇ ಸಮಾಜವನ್ನು ಬದಲಾಯಿಸಲು ಸಾಧ್ಯವೆಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತೀ ಲೀಡ್ ಕೊಟ್ಟಿರುವ ಹೊಸಟ್ಟಿ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಲು ಅವರು ನನ್ನ ಮೇಲಿಟ್ಟಿರುವ ಪ್ರೀತಿ- ವಿಶ್ವಾಸಕ್ಕೆ ಆಭಾರಿಯಾಗಲು ಈ ಸಲ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಕೇವಲ ೧೭ ಮತಗಳು ನಮ್ಮ ವಿರೋಧಿಗಳಿಗೆ ಹಾಕಿದ್ದು, ಎಲ್ಲ ಮತಗಳೂ ನನಗೆ ನೀಡಿದ್ದಾರೆ. ಈ ಗ್ರಾಮಸ್ಥರ ಋಣ ನನ್ನ ಮೇಲಿದೆ.ಸಣ್ಣ ಸಣ್ಣ ಗ್ರಾಮಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಮಾಡುವದರಿಂದ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವು ಮೂಡಿದಂತಾಗುತ್ತದೆ. ಹೊಸಟ್ಟಿಯಂತಹ ಚಿಕ್ಕ ಊರಿನಲ್ಲಿ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿ ಶಿಕ್ಷಕ ಸಮುದಾಯಕ್ಕೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲಾಮಟ್ಟದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ, ನಮ್ಮ ಭಾಗದಲ್ಲಿ ನಡೆಯುತ್ತಿವೆ. ಇಡೀ ರಾಜ್ಯವೇ ನಮ್ಮ ಮೂಡಲಗಿ ವಲಯದತ್ತ ನೋಡುತ್ತಿರುವುದು ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಮಕ್ಕಳು ಸಮಾಜದ ವಿವಿಧ ಸ್ಥರದಲ್ಲಿ ಹೆಮ್ಮೆಯ ಸಾಧನೆ ಮಾಡಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಬೇಕು. ಈ ದಿಸೆಯಲ್ಲಿ ನಾವು ನಮ್ಮ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳ ಪೈಪೋಟಿಗಳ ಮಧ್ಯೆಯೂ ಸರ್ಕಾರಿ ಶಾಲೆಗಳಲ್ಲಿ ಸುಮಾರು ೫೦ ಸಾವಿರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ರಾಜ್ಯದಲ್ಲಿಯೇ ಹೆಮ್ಮೆಯ ದಾಖಲೆಯಾಗಿದೆ. ೯ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಹೊಂದಿರುವ ಈ ತಾಲ್ಲೂಕು ೩೭ ಸರ್ಕಾರಿ ಪ್ರೌಢಶಾಲೆಗಳನ್ನು ಹೊಂದಿದೆ. ೪೩೮ ಪ್ರಾಥಮಿಕ ಶಾಲೆಗಳನ್ನು ಹೊಂದಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆಲ್ಲ ಶಾಲೆಯ ಶಿಕ್ಷಕರ ಶ್ರಮವೇ ಕಾರಣವಾಗಿದೆ ಎಂದು ಹೇಳಿದರು.
ಗುರ್ಲಾಪೂರ, ನಾಗನೂರ, ಕಲ್ಲೊಳ್ಳಿ, ಅರಭಾವಿ, ಮಲ್ಲಾಪೂರ ಪಿಜಿ, ಮೆಳವಂಕಿ, ಹುಣಶ್ಯಾಳ ಪಿಜಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕೇಂದ್ರೀಯ ಮಾದರಿಯ ಪಿಎಂಶ್ರೀ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದುರದುಂಡಿ ಮತ್ತು ತುಕ್ಕಾನಟ್ಟಿ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರಿ ಮಾಡಿಸುವ ವಾಗ್ದಾನ ಮಾಡಿದರು.


ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿವೃತ್ತ ಶಿಕ್ಷಕರನ್ನು ಸತ್ಕರಿಸಿದರು. ವಿವಿಧ ಪ್ರತಿಷ್ಟಾನಗಳಿಂದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾನಿಧ್ಯ ವಹಿಸಿ ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಹುಣಶ್ಯಾಳ ಪಿವೈ ಗ್ರಾಮ ಪಂಚಾಯತಿ ಅಧ್ಯಕ್ಷ ಜಗದೀಶ ಡೊಳ್ಳಿ, ಗ್ರಾ. ಪಂ. ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಮೂಡಲಗಿ ತಹಶೀಲ್ದಾರ ಮಹಾದೇವ ಸನಮೂರಿ, ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ತಾ.ಪಂ. ಇಓ ಎಫ್.ಜಿ. ಚಿನ್ನನವರ, ಜಿ.ಪಂ. ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಎಂ. ಎಂ. ಪಾಟೀಲ, ರವಿ ಪರುಶೆಟ್ಟಿ, ಹಣಮಂತ ತೇರದಾಳ, ಕರ್ನಲ್ ಪರುಶರಾಮ ನಾಯಿಕ, ಸಿಪಿಐ ಶ್ರೀಶೈಲ ಬ್ಯಾಕೂಡ, ಸಿಡಿಪಿಓ ವಾಯ್.ಕೆ.ಗದಾಡಿ, ಮಂಜುನಾಥ ಸಣ್ಣಕ್ಕಿ, ಎ.ಬಿ.ಮಲಬನ್ನವರ, ಎಸ್ಡಿಎಎಂಸಿ ಅಧ್ಯಕ್ಷ ಜಿ.ಎಸ್. ಕಂಬಳಿ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೂಡಲಗಿ ವಲಯ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ