ಮೂಡಲಗಿ: ‘ಮನುಷ್ಯನ ಬದುಕನ್ನು ಬಂಗಾರಗೊಳಿಸುವ ಶಕ್ತಿ ಆಧ್ಯಾತ್ಮಿಕತೆಗೆ ಇದೆ’ ಎಂದು ಹಂದಿಗುಂದದ ವೀರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಕಲ್ಲೋಳಿಯಲ್ಲಿ 41ನೇ ವರ್ಷದ ನವರಾತ್ರಿ ಉತ್ಸವದ 9ನೇ ದಿನವಾದ ಜರುಗಿದ ದೇವಿ ಪುರಾಣ ಮತ್ತು ಉಪದೇಶಾಮೃತದ ಸಮಾರೋಪದಲ್ಲಿ ಮಾತನಾಡಿದ ಪೂಜ್ಯರು ಸಾಧು, ಸಂತರು, ಸತ್ಪುರುಷರು ನೆಲೆಸಿದ್ದ ಭಾರತವು ಪ್ರಪಂಚಕ್ಕೆ ಆದ್ಯಾತ್ಮಿಕವನ್ನು ಬೋಧಿಸುವ ಮೂಲಕ ವಿಶ್ವಗುರು ಸ್ಥಾನವನ್ನು ಹೊಂದಿರುವ ಹೆಗ್ಗಳಿಕೆಯ ದೇಶವಾಗಿದೆ ಎಂದರು.
ಮನುಷ್ಯ ತನ್ನ ಅಂತರಂಗ ಮತ್ತು ಬಹಿರಂಗವನ್ನು ಶುದ್ಧವಾಗಿರಿಸಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ ಕಹಿಯಾಗಿದ್ದರೂ ಸಹ ಅವು ಬದುಕಿನ ಶಾಶ್ವತ ಮೌಲ್ಯಗಳಾಗಿವೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಸದ್ಭಾವನ್ನು ಬೆಳೆಸಿಕೊಳ್ಳಬೇಕು ಎಂದರು.
ದೇವರಲ್ಲಿ ನಾಟಕೀಯ ಭಕ್ತಿಯನ್ನು ಮಾಡದೆ ಶುದ್ಧವಾದ ಭಕ್ತಿಯಿಂದ ಧ್ಯಾನಿಸಿದರೆ ಮನುಷ್ಯನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆಧ್ಯಾತ್ಮಿಕ ಬಲವು ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ, ಬದುಕನ್ನು ಸಾರ್ಥಕವನ್ನಾಗಿಸುತ್ತದೆ ಎಂದರು.
ದೇವರ ಹೆಸರಿನಲ್ಲಿ ಮೌಡ್ಯಾಚರಣೆಗಳನ್ನು ತರಬಾರದು, ಆದ್ಯಾತ್ಮಿಕವನ್ನು ಮನುಷ್ಯನ ಬದುಕಿನಲ್ಲಿ ಅನುμÁ್ಠನಗೊಳಿಸುವಲ್ಲಿ ಪ್ರವಚನ, ಪುರಾಣ, ಸತ್ಸಂಗಗಳು ದಾರಿ ಮಾಡಿಕೊಡುತ್ತವೆ. ಮನುಷ್ಯ ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳಬೇಕು ಎಂದರು.
ಕಲ್ಲೋಳಿಯಲ್ಲಿ ಕಳೆದ 41 ವರ್ಷಗಳಿಂದ ದೇವಿ ಪುರಾಣ ಪರಂಪರೆ ನಡೆದುಬಂದಿದ್ದು ಮತ್ತು 9 ದಿನಗಳ ವರೆಗೆ ನಿತ್ಯ ಪೂಜ್ಯರ ಸತ್ಸಂಗ ಮಾಡುತ್ತಿರುವುದು ಮಾದರಿ ನವರಾತ್ರಿ ಉತ್ಸವವಾಗಿದೆ ಎಂದರು.
ಹುಲ್ಯಾಳ-ಜಮಖಂಡಿಯ ಸಿದ್ಧ ಓಂಕಾರ ಆಶ್ರಮದ ಮಾತೋಶ್ರೀ ಜಯಶ್ರೀದೇವಿ ಅವರು ದೇವಿ ಪುರಾಣದಲ್ಲಿ ಜಗನ್ಮಾಥೆಯ ಮಹಿಮೆ ಬಗ್ಗೆ ಮಾತನಾಡಿ ದೇವಿಯ ಪುರಾಣವನ್ನು ಮಂಗಲ ಮಾಡಿದರು.
ನವರಾತ್ರಿ ಉತ್ಸವಕ್ಕೆ ವಿವಿಧ ರೀತಿಯ ಸೇವೆ ಸಲ್ಲಿಸಿದ ಸದ್ಭಕ್ತರನ್ನು ಸನ್ಮಾನಿಸಿ ಗೌರವಿಸಿದರು.
ನವರಾತ್ರಿ ಉತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ, ಟ್ರಸ್ಟ್ ಸಮಿತಿ ವ್ಯವಸ್ಥಾಪಕ ಸಿದ್ದು ಮಾಯನ್ನವರ, ಸದಸ್ಯರಾದ ಭಗವಂತ, ಪತ್ತಾರ, ಶೀತಲ ಅಥಣಿ, ಉಮೇಶ ಪಾಟೀಲ, ಅಜೀತ ಬಾಳಪ್ಪ ಬೆಳಕೂಡ, ಶಿವಾನಂದ ಹೆಬ್ಬಾಳ, ರಾಮಪ್ಪ ಬೆಳಕೂಡ, ಭೀಮಶಪ್ಪ ಮಾಯನ್ನವರ, ಹಣಮಂತ ಮಾಯನ್ನವರ, ಬಾಳಪ್ಪ ಮಾಯನ್ನವರ, ಅಜ್ಜಪ್ಪ ಮಾಯನ್ನವರ, ಗಿರಮಲ್ಲಪ್ಪ ಸವಸುದ್ದಿ, ಬಸವರಾಜ ಹಿರೇಮಠ, ಮಲ್ಲಪ್ಪ ಕಡಾಡಿ ಇದ್ದರು. ಅನ್ನಸಂತರ್ಪಣೆಯಲ್ಲಿ ಸೇರಿದ ಸಾವಿರಾರು ಭಕ್ತರು ಭಾಗವಹಿಸಿದ್ದರು.