ಅಡಿವೇಶ ಮುಧೋಳ. ಬೆಟಗೇರಿ ಬೆಟಗೇರಿ: ದೀಪಾವಳಿ ಅಮವಾಸ್ಯೆ ಮ್ತು ಪಾಡ್ಯ ದಿನದ ಸಡಗರ, ಸಂಭ್ರಮ ನೋಡಬೇಕಾದರೆ ನೀವೊಮ್ಮೆ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1 ಮತ್ತು ನ.2ರಂದು ವಿಭಿನ್ನ ವೈಭವ, ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಣೆ ನಡೆಯಲಿದೆ.
ಬೆಟಗೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬ ಬಂದರೆ ನಾಲ್ಕೈದು ದಿನ ಮನೆ ಮುಂದೆ ಹಣತೆಗಳ ಸಾಲು, ಬೆಳಕಿನಿಂದ ಬೆಳಗುವ ದೀಪ ಕಣ್ಣಿದುರು ಬಂದು ನಿಲ್ಲತ್ತದೆ. ಅಲ್ಲದೇ ಊರಿನ ಪ್ರಮುಖ ಬೀದಿ ದೀಪ, ಹಾಗೂ ಎಲ್ಲಡೆ ವಿದ್ಯುತ್ ದೀಪ ಝಗಮಗಿಸುತ್ತವೆ. ಅಲ್ಲದೇ ಪಟಾಕಿಗಳ ಸದ್ದು ಅಬ್ಬರಿಸುತ್ತಿರುತ್ತದೆ.
ಬೆಟಗೇರಿ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆ ನ.1 ಮತ್ತು ಪಾಡ್ಯ ದಿನ ನ.2ರಂದು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ, ಪುರದೇವರ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರ್ಪನೆ, ಊರಿನ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವದ ಸಂಭ್ರಮ ಜರುಗುತ್ತದೆ. ಎಲ್ಲರ ಮನೆಗಳ ಮೇಲೆ ರಂಗು ರಂಗಿನ ಆಕಾಶ ಬುಟ್ಟಿಗಳು ವರ್ಣರಂಜಿತ ಜಗಮಗಿಸುವ ವಿದ್ಯುತ್ ದೀಪಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ.
ಕುರಿ ಬೆದರಿಸುವ ವೈಭವ : ದೀಪಾವಳಿ ಪಾಡ್ಯ ನ.2 ರಂದು ಸಾಯಂಕಾಲ 5:30 ರ ಹೊತ್ತಿಗೆ ಊರಿನಲ್ಲಿರುವ ಪ್ರಮುಖ ರಸ್ತೆ ಇಲ್ಲವೇ ಸ್ಥಳವೊಂದರಲ್ಲಿ ಕಬ್ಬು, ಜೋಳದ ದಂಟು, ಅವರೆಹೂ ಮತ್ತು ಇನ್ನೀತರ ಹೂ ಗಳಿಂದ ಹಂಪ್ ನಿರ್ಮಿಸಿ, ಅದಕ್ಕೆ ಪೂಜೆ, ನೈವೇದ್ಯ ಸಮರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಹಿಂಡುಗಳನ್ನು ಒಂದಡೆ ಸೇರಿಸಿ ಒಟ್ಟಿಗೆ ಕುರಿ ಬೆದರಿಸಲಾಗುವದು. ಈ ವೈಭವಪೂರಿತ ಕಾರ್ಯಕ್ರಮದಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಊರಿನ ಸಮಸ್ತ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಮಹಾಭಾರತ ನೆನಪಿಸುವ ಹಬ್ಬ: ಇಲ್ಲಿಯ ಎಲ್ಲರ ಮನೆಗಳಲ್ಲಿ ತರತರಹದ ಹೂಗಳಿಂದ ಅಲಂಕಾರಗೊಂಡು 5, 7, ಇಲ್ಲವೇ 9 ದಿನಗಳಿಂದ ಪೂಜಿಸಲ್ಪಟ್ಟ ಸಗಣಿಯಿಂದ ತಟ್ಟಿದ ಪಾಂಡವರನ್ನು (ಪಾಂಡ್ರವ) ಮನೆಯ ಮಾಳಗಿ ಮೇಲೆ ಇಡುವ ಸಂಪ್ರದಾಯ ಇದೆ. ಪಾಂಡ್ರವ ಕಳುಹಿಸುವ ಕಾರ್ಯಕ್ರಮ ಮಹಾಭಾರತ ನೆನಪಿಸುವ ಪ್ರತೀಕದ ಹಬ್ಬವಾಗಿದೆ.
ಭೋಜನ ಸವೆಯುವ ಸಂಭ್ರಮ: ದೀಪಾವಳಿ ಪಾಡ್ಯ ದಿನದಂದು ತಮ್ಮ ಮನೆಗಳಲ್ಲಿ ಮಹಿಳೆಯರು ಸಜ್ಜೆರೊಟ್ಟಿ, ಚಪಾತಿ, ತರತರಹದ ಹಿಂಡಿ, ಸೆಂಡಿಗೆ, ವಿವಿಧ ಕಾಳು, ಬದನಿಕಾಯಿ ಸೇರಿದಂತೆ ತರಕಾರಿ ಪಲ್ಯೆ ಹೀಗೆ ರುಚಿಕಟ್ಟಾದ ಅಡುಗೆಯನ್ನು ತಯಾರಿಸಿ, ಮನೆಯಲ್ಲಿ ಲಕ್ಷ್ಮೀ ಪೂಜೆ, ಉಡಿ ತುಂಬುವ, ಆರತಿ, ಆರಾಧನೆ ಮುಗಿದ ಮೇಲೆ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಂಗಲೆಯರಿಗೆ ಊಟದ ಮೊದಲ ಆದ್ಯತೆ, ಬಳಿಕ ಅಕ್ಕ-ಪಕ್ಕದ ಮನೆಯವರು, ಬಂಧು-ಬಾಂದವರನ್ನು ಕರೆದು ಭೋೀಜನ ಮಾಡಿಸುವ ಒಂದು ಸಂಭ್ರಮ.
ಹೊಸ ಬಟ್ಟೆ ತೊಟ್ಟ ಮನೆ ಮಂದಿ: ದೀಪಾವಳಿ ಹಬ್ಬ ಬಂದರೆ ಹೊಸ ಬಟ್ಟೆ ಖರೀದಿ ಬಲು ಜೊರಾಗಿರುತ್ತದೆ. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲದೇ ಹಬ್ಬದ ಪ್ರಯುಕ್ತ ತವರು ಮನೆಗೆ ಬಂದ ನವ ವಧುಗಳಾದ ಹೆಣ್ಣು ಮಕ್ಕಳಿಗೆ ಹಳ್ಳಿಯ ಮನೆಗಳಲ್ಲಿ ಅತಿಥಿ ಗೌರವ. ಹೀಗಾಗಿ ಮನೆ ಮಂದಿಯಲ್ಲಾ ಸೇರಿ ಸಂಭ್ರಮಿಸುವ ಸುದಿನವಾಗಿದೆ.
“ ಇಲ್ಲಿಯ ಜನರಿಗೆ ದೀಪಾವಳಿ ಹಬ್ಬ ಲಕ್ಷ್ಮೀ ದೇವರ ಮೇಲೆ ಭಯ, ಭಕ್ತಿಯ ಜೋತೆಗೆ ಸಡಗರದಿಂದ ಎಲ್ಲರೂ ಒಟ್ಟಾಗಿ ಸಂಭ್ರಮಿಸುವ, ರುಚಿಕಟ್ಟಾದ ಭೋಜನ ಸವೆಯುವ ಹಾಗೂ ಮಕ್ಕಳು, ಹೆಣ್ಣುಮಕ್ಕಳು ಹೊಸ ಬಟ್ಟೆ ತೊಟ್ಟು ಖುಷಿ ಖುಷಿಯಿಂದ ಓಡಾಡುವ ಸಂಭ್ರಮದ ಹಬ್ಬವಾಗಿದೆ.
ಪಾರ್ವತಿ.ರಮೇಶ.ಮುಧೋಳ. ಬೆಟಗೇರಿ, ತಾ.ಗೋಕಾಕ