ತೊಂಡಿಕಟ್ಟಿ: ಮನುಷ್ಯನ ಮನಸ್ಸು ಚಂಚಲವಾಗಿದೆ. ಮನುಷ್ಯನ ಮನಸ್ಸು ಮತ್ತು ಬುದ್ದಿ ಒಂದಕ್ಕೊಂದು ಹೊಂದಾಣಿಕೆ ಇಲ್ಲದಾಗಿದೆ. ಮನಸ್ಸನ್ನು ಬುದ್ದಿಯ ಹತೋಟಿಯಲ್ಲಿ ಇಟ್ಟುಕೊಳ್ಳಲು ಸತ್ಸಂಗದ ಅನಿವಾರ್ಯತೆ ಹೆಚ್ಚಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮಂಗಳವಾರ ರಾಮದುರ್ಗ ತಾಲ್ಲೂಕಿನ ತೊಂಡಿಕಟ್ಟಿಯ ಅವಧೂತ ಗಾಳೇಶ್ವರ ಶ್ರೀಗಳ 80ನೇ ಪುಣ್ಯ ಸ್ಮರಣೆ ಅಂಗವಾಗಿ ಅವಧೂತ ಪುಂಡಲೀಕ ಮಹಾರಾಜರ ಶಿಲಾ ಮಂದಿರದ ಉದ್ಘಾಟನೆ ನಿಮಿತ್ಯ ಜರುಗಿದ ಸತ್ಸಂಗದಲ್ಲಿ ಭಾಘವಹಿಸಿ ಮಾತನಾಡಿದ ಅವರು, ಬುದ್ದಿಯ ಹತೋಟಿ ತಪ್ಪಿದ ಮನಸ್ಸು ದುಷ್ಟ ಕಾರ್ಯಗಳ ಕಡೆಗೆ ವಾಲುತ್ತಿದೆ. ಮನಸ್ಸಿನ ಹತೋಟಿಗೆ ಸತ್ಸಂಗವೊಂದೆ ಸುಲಭ ಮಾರ್ಗ ಎಂದು ತಿಳಿಸಿದರು.
ಜೀವನ ಅಜ್ಞಾನದಿಂದ ಕಲುಷಿತಗೊಂಡಿದೆ. ಜೀವನ ಪಾವನ ಮಾಡಿಕೊಳ್ಳಲು ಜ್ಞಾನದ ಅವಶ್ಯತೆ ಇದೆ. ಜ್ಞಾನ ಸಂಪಾದನೆಗೆ ದಾರಿ ಮೂಲವೇ ಶೃದ್ಧೆಯಾಗಿದೆ. ಮನುಷ್ಯನಲ್ಲಿ ಶೃದ್ಧೆ ಇದ್ದರೆ ಮಾತ್ರ ಜ್ಞಾನ ಪ್ರಾಪ್ತಿಯಾಗುತ್ತದೆ. ಮನುಷ್ಯನಲ್ಲಿ ಶೃದ್ಧೆ ಇದ್ದರೆ ಸತ್ಸಂಗದಲ್ಲಿ ಭಾಗಿಯಾಗಿ ಪುನೀತನಾಗಲಿದ್ದಾನೆ. ಸತ್ಸಂಗದಲ್ಲಿ ಮಹಾ ಪುರುಷರ, ಮಠಾಧೀಶರರು ಹೇಳುವ ಮಾರ್ಗದಲ್ಲಿ ನಡೆದು ಜೀವನ ಉಜ್ವಲಗೊಳಿಸಿಕೊಳ್ಳಲು ಭಕ್ತರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ದಾರೂಢ ಸ್ವಾಮೀಜಿ ಮಾತನಾಡಿ, ಸತ್ಸಂಗ ಬೌದ್ಧಿಕ ಸಂಪತ್ತು. ಗಳಿಕೆಯ ಮೂಲವಲ್ಲ. ಆಂತರಿಕ ಸಂಪತ್ತು, ಸುಖ, ಶಾಂತಿ, ನೆಮ್ಮದಿ ಹೊಂದುವುದೇ ಸತ್ಸಂಗದ ಮೂಲ ಉದ್ದೇಶವಾಗಿದೆ. ಸತ್ಸಂಗದಿಂದ ಭಗವಂತನ ಕೃಪೆಗೆ ಪಾತ್ರವಾಗಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗದ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ಎನ್ನುವಂತೆ ಸಜ್ಜನರೊಂದಿಗೆ ಜೀವಿಸುವುದು. ಎಲ್ಲರೂ ಸತ್ಸಂಗಿಗಳಾಗಿ ಜೀವನವನ್ನು ನಿಸ್ಸಂಗಿಯಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕರಿಕಟ್ಟಿಯ ಗುರುನಾಥ ಶಾಸ್ತ್ರೀಜಿ ಕಾರ್ಯಕ್ರಮ ನಿರೂಪಿಸಿದರು. ತೊಂಡಿಕಟ್ಟಿಯ ಅವಧೂತ ವೆಂಕಟೇಶ್ವರ ಸ್ವಾಮೀಜಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು.
ವೇದಿಕೆಯಲ್ಲಿ ಹುಣಶ್ಯಾಳದ ನಿಜಗುಣದೇವರು, ಹೊಸಕೋಟಿಯ ರೇವಯ್ಯ ಸ್ವಾಮೀಜಿ, ಕೊಟಬಾಗಿಯ ಪ್ರಭುದೇವ ಸ್ವಾಮೀಜಿ, ಬುದ್ನಿಖುರ್ದ್‍ನ ರವೀಂದ್ರ ಸ್ವಾಮೀಜಿ, ದಾದನಟ್ಟಿಯ ನಿಜಾನಂದ ಸ್ವಾಮೀಜಿ, ಶಿವಪುತ್ರ ಅವಧೂತರು ಇದ್ದರು.