Breaking News
Home / ಬೆಳಗಾವಿ / ಗೋಕಾಕದಲ್ಲಿ ಅಂಬಿಗರ ಸಮಾಜಕ್ಕೆ 4 ಗುಂಟೆ ನಿವೇಶನ ಮಂಜೂರು – ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕದಲ್ಲಿ ಅಂಬಿಗರ ಸಮಾಜಕ್ಕೆ 4 ಗುಂಟೆ ನಿವೇಶನ ಮಂಜೂರು – ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಂಬಿಗರ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಗೋಕಾಕ ನಗರದಲ್ಲಿ 4 ಗುಂಟೆ ನಿವೇಶನವನ್ನು ನಗರಸಭೆಯಿಂದ ಮಂಜೂರು ಮಾಡಲಾಗಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ರವಿವಾರದಂದು ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಕಂಚಿನ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಗೋಕಾಕದಲ್ಲಿ ಅಂಬಿಗರ ಸಮಾಜಕ್ಕೆ ಕಲ್ಯಾಣ ಮಂಟಪ ಅಥವಾ ಸಮುದಾಯ ಭವನವನ್ನು ನಿರ್ಮಿಸಿಕೊಡುವುದಾಗಿ ಅವರು ತಿಳಿಸಿದರು.

ಹುಣಶ್ಯಾಳ ಪಿ.ಜಿ ಗ್ರಾಮದ ಅಂಬಿಗರ ಸಮಾಜದವರು ಒಗ್ಗಟ್ಟಿನಿಂದ ಕೂಡಿಕೊಂಡು ಗ್ರಾಮಸ್ಥರ ಸಹಕಾರದಿಂದ ಅಂಬಿಗರ ಚೌಡಯ್ಯನವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಶ್ಲಾಘನೀಯವಾಗಿದೆ. ಸುಮಾರು 6 ಲಕ್ಷ ರೂ ವೆಚ್ಚದ ಕಂಚಿನ ಮೂರ್ತಿಯು ಜನರನ್ನು ಆಕರ್ಷಿಸುವಂತೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸಮಾಜ ಬಾಂಧವರನ್ನು ಅಭಿನಂದಿಸುತ್ತೇನೆಂದು ಅವರು ಹೇಳಿದರು.
ಹಿಂದುಳಿದ ಅಂಬಿಗರ ಸಮಾಜದ ಶ್ರೇಯೋಭಿವೃದ್ದಿಗೆ ಬದ್ಧನಾಗಿರುವೆ. ಈ ದಿಸೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತೇನೆ. ಈ ಸಮಾಜವು ಮೊದಲಿನಿಂದಲೂ ನಮ್ಮ ಕುಟುಂಬದೊಂದಿಗೆ ಗುರುತಿಸಿಕೊಂಡಿದ್ದು, ಅದಕ್ಕಾಗಿ ಈ ಸಮಾಜಕ್ಕೆ ತಮ್ಮ ಕುಟುಂಬವು ಆಭಾರಿಯಾಗಿದೆ. ಹಿಂದುಳಿದ ಸಮಾಜಗಳು ಸಂಘಟಿತರಾಗಿ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರು ಸಾರಿದಂತೆ ಶಿಕ್ಷಣ, ಸಂಘಟನೆ, ಮತ್ತು ಹೋರಾಟವನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ನಾವು ಈ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿಯೊಬ್ಬರು ಸಾಕ್ಷರರಾಗಬೇಕು. ಸಮಾಜವನ್ನು ವ್ಯವಸ್ಥಿತವಾಗಿ ಸಂಘಟಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ಕೆಲಸಗಳು ನಡೆಯಬೇಕು. ಈ ಸಮಾಜದ ರಥವನ್ನು ಮುಂದಕ್ಕೆ ಸಾಗಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ಆದರೆ ಯಾವುದೇ ಕಾರಣಕ್ಕೂ ಈ ರಥವನ್ನು ಹಿಂದಕ್ಕೆ ತಳ್ಳಬಾರದೆಂದು ಡಾ|| ಅಂಬೇಡ್ಕರ್ ವಾಣಿಯನ್ನು ನೆನಪಿಸಿದ ಅವರು, ಈ ಸಮಾಜದ ಏಳ್ಗೆಯೇ ನನ್ನ ಧ್ಯೇಯವಾಗಿದೆ. ಯಾವುದೇ ಸಮಯದಲ್ಲಿಯೂ ನಾನು ನಿಮ್ಮೊಂದಿಗೆ ಇದ್ದು ನಿಮ್ಮ ಕಷ್ಟ-ಸುಖದಲ್ಲಿ ಭಾಗಿಯಾಗುವ ಕೆಲಸ ಮಾಡುತ್ತೇನೆಂದು ಸಮಾಜ ಬಾಂಧವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಯ ನೀಡಿದರು.
ಹುಣಶ್ಯಾಳ ಪಿ.ಜಿ. ಗ್ರಾಮಸ್ಥರ ಒಗ್ಗಟ್ಟಿನ ಫಲವಾಗಿ ಜಿಲ್ಲೆಯಲ್ಲಿಯೇ ಮಾದರಿಯೆನ್ನುವಂತೆ ಹಳ್ಳಿ ಸಂತೆಯೂ ನಿರ್ಮಾಣವಾಗಿದೆ. ಪ್ರತಿ ಶುಕ್ರವಾರದಂದು ಈ ಗ್ರಾಮದಲ್ಲಿ ಸಂತೆಯು ನಡೆಯಲಿದೆ. 1.87 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಳ್ಳಿ ಸಂತೆ ಮಾರುಕಟ್ಟೆ ಕಾಮಗಾರಿಗೆ ನಾನು 50 ಲಕ್ಷ ರೂಗಳನ್ನು ನೀಡಿದ್ದು, ಉಳಿದ ಹಣವನ್ನು ಗ್ರಾಮ ಪಂಚಾಯತಿಯಿಂದ ವಿವಿಧ ನಿಧಿಯಿಂದ ಬಳಕೆ ಮಾಡಿ ಜನರು ಮೆಚ್ಚುವ ರೀತಿಯಲ್ಲಿ ಸುಂದರವಾದ ಹಳ್ಳಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಸಮಸ್ತ ಗ್ರಾ.ಪಂ ಸದಸ್ಯರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ sಸುಮಾರು 1.87 ಕೋಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹಳ್ಳಿ ಸಂತೆ ಮಾರುಕಟ್ಟೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು. ಮಹಾಸ್ವಾಮಿಗಳು, ವಿ.ಪ ಸದಸ್ಯ ಎನ್.ರವಿಕುಮಾರ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಮತ್ತು ಸಮಾಜದ ನಾಯಕ ಎನ್.ರವಿಕುಮಾರ ಮಾತನಾಡಿ, ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ಅಚ್ಚುಕಟ್ಟಾಗಿ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ನಿರ್ಮಿಸಿರುವುದು ಇಡೀ ಸಮಾಜವೇ ಹೆಮ್ಮೆ ಪಡುವಂತಾಗಿದೆ. ನಮ್ಮ ಹಿಂದುಳಿದ ಸಮಾಜಕ್ಕೆ ಆಸರೆಯಾಗಿ ನಿಂತುಕೊಂಡು ನಮಗೆ ಶಕ್ತಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಎಲ್ಲ ಕುಟುಂಬದವರಿಗೆ ಅಂಬಿಗರ ಸಮಾಜವು ಋಣಿಯಾಗಿದೆ. ಹಿಂದುಳಿದ ಹಳ್ಳಿಗಳು ಯಾವ ರೀತಿ ಅಭಿವೃದ್ದಿಯಾಗುತ್ತವೆ ಎಂಬುದನ್ನು ನಾವು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ತಿಳಿದುಕೊಳ್ಳಲು ಈ ಗ್ರಾಮವೇ ಜಲ್ವಂತ ಸಾಕ್ಷಿಯಾಗಿದೆ. ರಸ್ತೆಗಳು, ಕುಡಿಯುವ ನೀರು, ಶಿಕ್ಷಣ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ದಿ ಪಥದತ್ತ ಸಾಗುತ್ತಿರುವುದು ಈ ಭಾಗದ ಜನರ ಭಾಗ್ಯವಾಗಿದೆ. ದೊಡ್ಡ ಮನಸ್ಸಿನ, ದೊಡ್ಡ ಹೃದಯದ ವ್ಯಕ್ತಿಯಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಸಮುದಾಯಕ್ಕೆ ಆಶಾಕಿರಣವಾಗಿದ್ದಾರೆ. ಅವರೊಂದಿಗೆ ನಾವು ಯಾವಾಗಲೂ ಇದ್ದು ಅವರಿಗೆ ಶಕ್ತಿಯಾಗಿ ಇರೋಣ. ಮಹಾನ್ ಪುರುಷರ ಮೂರ್ತಿ ಪ್ರತಿಷ್ಠಾಪನೆ ಮಾಡಿದರೇ ನಮ್ಮ ಕೆಲಸ ಮುಗಿದಂತಲ್ಲ, ಅಣ್ಣ ಬಸವಣ್ಣನವರು ಹೇಳಿದಂತೆ ಜಾತಿ-ಜಾತಿಗಳಲ್ಲಿ ವೈಷಮ್ಯ ಬೆಳೆಯಬಾರದು. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ನಡೆಯಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.

ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಹಾಸ್ವಾಮಿಗಳು, ವಿ.ಪ ಸದಸ್ಯ ಎನ್.ರವಿಕುಮಾರ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 25 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಚೌಡಯ್ಯನವರ ಸಮುದಾಯ ಭವನವನ್ನು ಉದ್ಘಾಟಿಸಿದರು. ಸಮುದಾಯದ ಮುಖಂಡರು ಬೃಹತ್ ಹೂವಿನ ಹಾರವನ್ನು ಶಾಸಕರಿಗೆ ಅರ್ಪಿಸಿ ಗೌರವಿಸಿದರು.
ದಿವ್ಯ ಸಾನಿಧ್ಯವನ್ನು ನರಸೀಪೂರ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಸ್ಥಳೀಯ ಪ್ರಭುದೇವರು ಸ್ವಾಮಿಗಳು, ಸಿದ್ದಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು, ಝಂಗಟಿಹಾಳದ ಚಂದ್ರಶೇಖರ ಸ್ವಾಮಿಗಳು, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಶ ಪಾಟೀಲ, ತಾ.ಪಂ ಮಾಜಿ ಸದಸ್ಯರಾದ ಪುಂಡಲೀಕ ಸುಂಕದ, ಬಸವರಾಜ ಹುಕ್ಕೇರಿ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಅವ್ವಣ್ಣ ಡಬ್ಬನವರ, ಉಪಾಧ್ಯಕ್ಷೆ ಕಸ್ತೂರಿ ಇಂಚಲ್, ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ರಾಮನಾಯ್ಕಿ ನಾಯಿಕ, ಸಮಾಜ ಮುಖಂಡರಾದ ಸುನೀಲ ಪಾಶ್ಚಾಪೂರ, ಮಲ್ಲಪ್ಪ ಕೊಣ್ಣೂರ, ಧರ್ಮಣ್ಣ ಹುಕ್ಕೇರಿ, ದುಂಡಪ್ಪ ಹುಕ್ಕೇರಿ, ಹಣಮಂತ ಸುಂಕದ, ಲಕ್ಕಪ್ಪ ಸುಂಕದ, ಶಂಕರ ಸುಣಗಾರ, ಶಂಕರ ಗಡ್ಡಿ, ಕಲ್ಲಪ್ಪ ಗವನಾಳಿ, ಲಕ್ಷ್ಮಣ ಯಮಕನಮರಡಿ, ಮುದಕಪ್ಪ ತಳವಾರ, ಕೃಷ್ಣಾ ನಾಶಿ, ಕಾಶಪ್ಪ ಕೋಳಿ, ಬಸು ಮೋತ್ಯಾಗೋಳ, ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ