ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು
ರಸ್ತೆ ಮೇಲೆ ಸೈಕಲ್ ಓಡೋದು ಕಾಮನ್, ಆದ್ರೆ ನೀರಿನ ಮೇಲೆ ಓಡುತ್ತೆ ಅಂದ್ರೆ ನಂಬೋಕೆ ಸಾಧ್ಯನಾ..? ಹೌದು ನಂಬಲೇಬೇಕು. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸೈಕಲ್ ಚಾಲಿತ ಬೋಟ್ವೊಂದನ್ನ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅವರಾದಿ ಗ್ರಾಮದ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಬಸವರಾಜ ನಂದೇಪ್ಪನ್ನವರ ಹಾಗೂ ಸಂಜು ಹೂಗಾರ ಎನ್ನುವ ವಿದ್ಯಾರ್ಥಿಗಳು ಸೈಕಲ್ ಚಾಲಿತ ಬೋಟ್ ತಯಾರಿಸಿದ್ದಾರೆ. ನಿನ್ನೆ ತಮ್ಮ ಗ್ರಾಮದ ಪಕ್ಕದಲ್ಲಿರುವ ಘಟಪ್ರಭಾ ನದಿಯಲ್ಲಿ ಬೋಟ್ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಬಾಲಕರ ಈ ಸೈಕಲ್ ಚಾಲಿತ ಬೋಟ್ ನೋಡಲು ಇಡೀ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ನದಿ ತೀರದಲ್ಲಿ ಸೇರಿದ್ದರು. ಮಕ್ಕಳು ನದಿಯಲ್ಲಿ ಸೈಕಲ್ ಓಡಿಸುವುದನ್ನ ಕಂಡು ಚಪ್ಪಾಳೆ ತಟ್ಟಿ, ಘೋಷಣೆ ಕೂಗಿ ಸಂಭ್ರಮಿಸಿದರು. ಅದರಲ್ಲೂ ತಮ್ಮ ಶಾಲೆಯ ವಿದ್ಯಾರ್ಥಿಗಳು ಇಂತಹದೊಂದು ಸಾಧನೆ ಮಾಡಿರುವುದಕ್ಕೆ ಶಿಕ್ಷಕರು ತೀವ್ರ ಸಂತಸ ವ್ಯಕ್ತಪಡಿಸಿದರು.
ಈ ಬಾಲಕರು ಯಾವುದೇ ಗುರು, ಮಾರ್ಗದರ್ಶನ ಇಲ್ಲದೇ ಸ್ವಯಂಪ್ರೇರಿತವಾಗಿ ತಾವೇ, ಸ್ಥಳೀಯವಾಗಿ ಸಿಗುವ ವಸ್ತುಗಳನ್ನ ಬಳಸಿಕೊಂಡು ಈ ಸೈಕಲ್ ಚಾಲಿತ ಬೋಟ್ ತಯಾರಿಸಿದ್ದಾರೆ. ಸೈಕಲ್ಗೆ ನೀರಿನ ಕ್ಯಾನ್ಗಳನ್ನ ಜೋಡಿಸಿ, ಕೆಲವು ಮಾರ್ಪಾಡುಗಳನ್ನ ಮಾಡಿಕೊಂಡು ಈ ಬೋಟ್ ರೆಡಿ ಮಾಡಿದ್ದಾರೆ. ಕೆಲವು ದಿನಗಳಿಂದ ಮಕ್ಕಳು ಇಂತಹದೊಂದು ಸೈಕಲ್ ಚಾಲಿತ ಬೋಟ್ ತಯಾರು ಮಾಡುತ್ತಿರುವುದಾಗಿ ಹೇಳುತ್ತಿದ್ದರೂ ಪೋಷಕರು, ಶಿಕ್ಷಕರು ಅಷ್ಟಾಗಿ ಗಮನಹರಿಸಿರಲಿಲ್ಲ. ಆದರೆ ಯಾವಾಗ ಅದರ ಪ್ರಯೋಗ ಮಾಡಲು ಮುಂದಾದರೋ ಆಗ ಎಲ್ಲರು ಬೆರಗಾಗಿ ಹೋದರು.
ವರದಿ ಈಶ್ವರ ಢವಳೇಶ್ವರ