ಗೋಕಾಕ- ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೈ ಜೋಡಿಸಿದರೆ ಮಾತ್ರ ಸಂಘ- ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತವೆ. ಜೊತೆಗೆ ಗ್ರಾಹಕರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದರೆ ಸಂಘಗಳು ಬೆಳವಣಿಗೆ ಹೊಂದುತ್ತವೆ. ಇದಕ್ಕೆ ದುರದುಂಡೀಶ್ವರ ಸಹಕಾರಿ ಸಂಘವೇ ನೈಜ ಉದಾಹರಣೆಯಾಗಿದೆ ಎಂದು ಅರಭಾವಿ ಶಾಸಕರೂ ಆಗಿರುವ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇತ್ತಿಚೆಗೆ ದಶಮಾನೋತ್ಸವ ಸಂಭ್ರಮ ಕಂಡ ತಾಲ್ಲೂಕಿನ ದುರದುಂಡಿ ಗ್ರಾಮದ ದುರದುಂಡೀಶ್ವರ ಕ್ರೆಡಿಟ್ ಸಹಕಾರಿ ಸಂಘದ ನೂತನ ಕಚೇರಿಗೆ ಮಂಗಳವಾರದಂದು ಭೇಟಿ ನೀಡಿದ ಅವರು, ಈ ಭಾಗದಲ್ಲಿ ರೈತರ ಸಹಕಾರದಿಂದ ಈ ಸಂಘವು ಆರ್ಥಿಕವಾಗಿ ಬಲಾಢ್ಯಗೊಂಡಿದ್ದಲ್ಲದೇ ಈಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಅರಭಾವಿ ದುರದುಂಡೀಶ್ವರ ಮಠದ ಕೃಪೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಇಲ್ಲಿನ ಸಹಕಾರಿ ಸಂಘವು ಪ್ರಗತಿಪಥದತ್ತ ದಾಪುಗಾಲು ಹಾಕುತ್ತಿದೆ. ಗ್ರಾಹಕರಿಗೆ ತಕ್ಕ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ಮಾಡಿ ಕೊಡುತ್ತಿದೆ. ಸಿಬ್ಬಂದಿಯವರಿಂದ
ಸಾಲ ವಸೂಲಾತಿ ಪ್ರಕ್ರಿಯೆಯೂ ಸಹ ಚೆನ್ನಾಗಿದೆ. ಸಂಕಷ್ಟದಲ್ಲಿರುವ ಚಿಕ್ಕ ರೈತರಿಗೆ ಸಾಲ ನೀಡಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಕೈ ಜೋಡಿಸುತ್ತಿದ್ದರೆ, ಇತ್ತ ನಿಗದಿತ ಅವಧಿಯೊಳಗಿನ ಸಾಲ ವಸೂಲಾತಿಯನ್ನು ಮಾಡುವ ಮೂಲಕ ಸಂಘದ ಏಳ್ಗೆಯೂ ಸಹ ಆಗುತ್ತಿದೆ. ಇದಕ್ಕೆ ಪರಸ್ಪರ ಸಹಕಾರ ಮನೋಭಾವನೆ ಕಾರಣವಾಗಿದೆ ಎಂದು ಹೇಳಿದರು.
ದುರದುಂಡಿ ಗ್ರಾಮದ ಅಭಿವೃದ್ಧಿಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಜನಪ್ರೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಜನರಿಗೆ ಅಗತ್ಯ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ನೀಗಿಸಲು ಕ್ರಮಗಳನ್ನು ಕೈಕೊಳ್ಳಲಾಗಿದೆ. ಈಗಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವು ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ನಮ್ಮ ಅರಭಾವಿ ಕ್ಷೇತ್ರದಲ್ಲಿ ಕೆಲಸಗಳು ನಡೆಯುತ್ತಿವೆ. ಹದಗೆಟ್ಟಿರುವ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆಯೂ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇಲ್ಲಿನ ಯಲ್ಲಮ್ಮದೇವಿ ದೇವಸ್ಥಾನಕ್ಕೆ ೫ ಲಕ್ಷ ರೂಪಾಯಿ ಮತ್ತು ಜೈನ್ ಮಂದಿರಕ್ಕೆ ೬ ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಪ್ಪ ಸಣ್ಣಲಗಮನ್ನವರ, ಘನೀಬಮಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಅಂತರಗಟ್ಟಿ, ಉಪಾಧ್ಯಕ್ಷ ವೀರಭದ್ರಯ್ಯಾ ಮಠಪತಿ, ಮುಖಂಡರಾದ ಮಹಾದೇವ ತಾಂಬಟಿ, ಡಾ. ಶಂಕರ sಗೋರಕನಾಥ, ಹೊನ್ನಜ್ಜ ಕೋಳಿ, ಪರಸಪ್ಪ ವಗ್ಗನ್ನವರ, ಭೀಮಶಿ ಅಂತರಗಟ್ಟಿ, ವೀರೇಂದ್ರ ಪತ್ತಾರ, ರಾಯಪ್ಪ ನಿಂಗನ್ನವರ, ಮಹೇಶ ನೀಲಗಾರ, ಪ್ರಭು ಮಠದ, ರಮೇಶ ಸಂಪಗಾವಿ, ದುಂಡಪ್ಪ ಅರಭಾವಿ, ಸದಾಶಿವ ಸವದತ್ತಿ, ಕೆಂಚಪ್ಪ ಸಪಡ್ಲ, ಪಿಕೆಪಿಎಸ್ ಅಧ್ಯಕ್ಷ ಹಾಲಪ್ಪ ಅಂತರಗಟ್ಟಿ, , ಅವ್ವಣ್ಣ ಗೌಡಿ,ಭರತೇಶ ಗುಮಡಿ, ಬಾಳೇಶ ಚಂದವ್ವಗೋಳ, ಡಿ.ಎಲ್. ಅರಭಾವಿ, ಹಣಮಂತ ವಗ್ಗನ್ನವರ, ಮೂಡಲಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜ್ಯಾಗೋಳ, ಸಹಕಾರಿ ಸಂಘದ ಕಾರ್ಯದರ್ಶಿ ಬಸಗೌಡ ಪಾಟೀಲ, ಗ್ರಾಮ ಪಂಚಾಯತಿ- ಪಿಕೆಪಿಎಸ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೂಡಲಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘವು ಹೊರತಂದ ೨೦೨೫ ರ ದಿನದರ್ಶಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡುಗಡೆ ಮಾಡಿದರು.
