ಮೂಡಲಗಿ: ‘ಕವಿ ತಾನು ಬರೆಯುವ ಕಾವ್ಯವು ಜನರ ಹೃದಯವನ್ನು ಮುಟ್ಟವಂತಿರಬೇಕು’ ಎಂದು ಜಾನಪದ ಗಾಯಕ ಗುರುರಾಜ ಹೊಸಕೋಟಿ ಅವರು ಹೇಳಿದರು.
ಇಲ್ಲಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಮಹಾರಾಜ ಸಿದ್ದು ಹಳ್ಳೂರ ಇವರ ‘ಎಷ್ಟ ಚಂದಿತ್ತ ಆವಾಗ’ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಕವಿತೆಗಳು ಸಾಮಾಜಿಕ ಕಳಕಳಿ ಹಾಗೂ ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದಾಗ ಕವಿತೆಗಳು ಸಾರ್ಥಕವನ್ನು ಪಡೆಯುತ್ತವೆ ಎಂದರು.
ಮಹಾರಾಜ ಸಿದ್ದು ಅವರು ಬರೆದಿರುವ ಕವನಗಳು ಸಾಮಾಜಿಕ ಕಳಕಳಿ ಹಾಗೂ ಲೋಕಾನುಭವ ಹೊಂದಿರುದರಿಂದ ಜನರ ಹೃಯದವನ್ನು ತಲಪುವಲ್ಲಿ ಸಮರ್ಥವಾಗಿವೆ. ಸಾವಿರಾರು ಪದ್ಯಗಳನ್ನು ಬರೆದಿದ್ದು ಅವರ ಸಾಹಿತ್ಯ ಬರವಣಿಗೆಗೆ ದೊರೆಯಬೇಕಾದ ಮಾನ್ಯತೆ ದೊರೆಯದಿರುವುದು ವಿಷಾದಿಸುವ ಸಂಗತಿಯಾಗಿದೆ. ನಮ್ಮವರ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕೃತಿಗಳನ್ನು ರಚಿಸುವ ಮೂಲಕ ಸಾಹಿತಿ, ಬರಹಗಾರರು ಶಾಶ್ವತವಾಗಿ ಸಮಾಜದಲ್ಲಿ ನೆಲೆಸುತ್ತಾರೆ. ಕವಿ, ಸಾಹಿತಿಗಳು ಬೆಳೆಯಬೇಕಾದರೆ ಜನರು ಪುಸ್ತಕಗಳನ್ನು ಕೊಂಡು ಓದುವ ಸಂಸ್ಕøತಿ ಬೆಳೆಯಬೇಕು ಎಂದರು.
ಸಾಹಿತಿ ದುರ್ಗಪ್ಪ ದಾಸನ್ನವರ ಕೃತಿ ಪರಿಚಯಿಸಿ ಎಷ್ಟ ಚಂದಿತ್ತ ಆವಾಗ ಕವನ ಸಂಕಲನವು ಸಿದ್ದು ಮಹಾರಾಜರದು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಬಿಇಒ ಅಜಿತ್ ಮನ್ನಿಕೇರಿ, ಗಾಯಕ ಶಬ್ಬೀರ ಡಾಂಗೆ, ಸಿದ್ರಾಮ ದ್ಯಾಗಾನಟ್ಟಿ, ಡಾ. ಮಹಾದೇವ ಜಿಡ್ಡಿಮನಿ, ಸಿದ್ದು ಹುಕ್ಕೇರಿ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಡಾ. ಮಹಾದೇವ ಪೋತರಾಜ, ಆನಂದ ಸಂತಿ, ಸಿದ್ದು ದುರದುಂಡಿ, ಮುರಿಗೆಪ್ಪ ಮಾಲಗಾರ ವೇದಿಕೆಯಲ್ಲಿದ್ದರು.
ಚಿದಾನಂದ ಹೂಗಾರ ಪ್ರಾಸ್ತಾವಿಕ ಮಾತನಾಡಿದರು, ಪ್ರಕಾಶ ಮೇತ್ರಿ ವಂದಿಸಿದರು.
ಜನ್ಮ ದಿನಾಚರಣೆ: ಕೃತಿಕಾರ ಮಹಾರಾಜ ಸಿದ್ದು ಹಳ್ಳೂರ ಅವರ 50ನೇ ಹುಟ್ಟು ಹಬ್ಬವನ್ನು ಅವರ ಚೊಚ್ಚಲ ಕೃತಿ ಬಿಡುಗಡೆಯೊಂದಿಗೆ ಸಂಭ್ರಮದಿಂದ ಆಚರಿಸಿದರು.