ಬೆಟಗೇರಿ ಸುತ್ತಮುತ್ತ ಸುರಿದ ಮಳೆ, ಬೆಳೆ ನಾಶವಾಗುವ ಆತಂಕದಲ್ಲಿ ರೈತರು.!
*ಅಡಿವೇಶ ಮುಧೋಳ.ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಹಲವು ದಿನಗಳಿಂದ ಹಗಲು-ರಾತ್ರಿ ಆಗಾಗ ಮಳೆ ಸುರಿದು, ಇಲ್ಲಿಯ ಭೂಮಿಯನ್ನು ತಂಪಾಗಿಸಿದೆ. ಒಂದಡೆ ಇಲ್ಲಿಯ ರೈತರಿಗೆ ಮಾಳೆಯಾಗಿ ಸಂತಸವಾದರೆ ಇನ್ನೂಂದಡೆ ಭೂಮಿಯಲ್ಲಿರುವ ಕೆಲವು ಬೆಳೆ ಹಾಳಾಗುವ ಆತಂಕ ಎದುರಾಗಿದೆ.
ಈಗ ಮತ್ತೇ ನಾಲ್ಕೈದು ದಿನಗಳಿಂದ ಬೆಟಗೇರಿ ಗ್ರಾಮದ ಸುತ್ತ-ಮುತ್ತ ಹಗಲಿರುಳು ಆಗಾಗ ಮಳೆ ಧರೆಗಿಳಿಯುತ್ತಿದೆ. ಈಗ ಹಗಲು ಇಲ್ಲವೇ ರಾತ್ರಿ ಹೊತ್ತು ಆಗಾಗ ಮಳೆ ಸುರಿದು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಮಳೆನೀರು ನಿಂತುಕೊಂಡ ಪರಿಣಾಮ ಗೋವಿನಜೋಳ, ಹೆಸರು ಸೇರಿದಂತೆ ಭೂಮಿಯಲ್ಲಿದ್ದ ಕೆಲವು ಬೆಳೆಗಳು ನೆಲಕಚ್ಚಿ ಈಗಾಗಲೇ ನಾಶವಾಗುವ ಲಕ್ಷ್ಮಣಗಳು ಗೋಚರಿಸುತ್ತಿದೆ. ಹೀಗೆ ಕೆಲವು ದಿನ ಮಳೆ ಮುಂದುವರಿದರೆ ಅಳಿದುಳಿದ ಇನ್ನೂ ಕೆಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.
ಮಂಗಳವಾರ ಆ.19ರಂದು ಸ್ಥಳೀಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ತೋಟಪಟ್ಟಿಗೆ ಹೋಗುವ ರಸ್ತೆ ಮೇಲೆ ನಿತ್ಯ ಸಂಚರಿಸುವ ಜನರಿಗೆ ರಸ್ತೆಗಳಲ್ಲಾ ಕೆಸರು ಗದ್ದೆಗಳಾಗಿ ಕಿಚಿಪಿಚಿ ಕೆಸರು ತುಳಿತ್ತಾ ತುಂಬಾ ತೊಂದರೆ ಉಂಟಾಗಿದೆ. ಅಲ್ಲದೇ ದಿನವಿಡಿ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ದನಕರುಗಳಿಗೆ ತೋಟಪಟ್ಟಿಗಳಲ್ಲಿ ಮೇವು ತರಲು ರೈತರು ದುಸ್ಥಿತಿ ಅನುಭವಿಸುತ್ತಿದ್ದಾರೆ.
ಹೀಗಾಗಿ ಜನ-ದನಗಳ ಜೀವನ ಅಸ್ತವ್ಯಸ್ತವಾಗಿದೆ. ತೋಟಪಟ್ಟಿಯಲ್ಲಿ ವಾಸವಾಗಿರುವ ಜನ, ಶಾಲಾ ಮಕ್ಕಳು, ರೈತರು ಆ ಕಡೆಯಿಂದ ಈ ಕಡೆ ಗ್ರಾಮಕ್ಕೆ ಬರಲು ಪರದಾಡುವ ಸ್ಥಿತಿ ಎದುರಾಗಿದೆ. ಜಿಟಿ, ಜಿಟಿ ಮಳೆ ಸುರಿಯುತ್ತಿರುವದರಿಂದ ದ್ವಿಚಕ್ರ ವಾಹನ ಸವಾರರು ಬೇರೆ ಕಡೆ ಪ್ರಯಾಣಕ್ಕೆ ಕಡಿವಾಣ ಹಾಕಿದ ಸಂಗತಿ ಸಾಮಾನ್ಯವಾಗಿತ್ತು. ಹೀಗಾಗಿ ರಸ್ತೆ ಮೇಲೆ ದ್ವಿಚಕ್ರ ವಾಹನಗಳ ಓಡಾಟ ಇಲ್ಲದಂತಾಗಿದೆ.
