ಬೆಂಗಳೂರು: ಜಗತ್ತಿನ ಜನಪ್ರಿಯ ಕ್ರೀಡೆಗಳಲ್ಲಿ ವಾಲಿಬಾಲ್ ಒಂದಾಗಿದ್ದು, ಈ ಕ್ರೀಡೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಸುವ ಉದ್ದೇಶವು ನಮ್ಮ ವಾಲಿಬಾಲ್ ಅಸೋಸಿಯೇಷನ್ ಗೆ ಇದೆ. ಇಂತಹ ಕ್ರೀಡೆಗಳನ್ನು ರಾಜ್ಯದಲ್ಲೆಡೆ ವಿಸ್ತರಿಸುವ ಮೂಲಕ ಮೂಲಕ ಹೊಸ ಅಧ್ಯಾಯದ ಶಕೆ ಆರಂಭವಾಗಿದೆ ಎಂದು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ (ಕೆವ್ಹಿಎ) ಉಪಾಧ್ಯಕ್ಷ ಮತ್ತು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು.
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ವ್ಹಾಲಿಬಾಲ್ ಅಸೋಸಿಯೇಷನ್ ಹಮ್ಮಿಕೊಂಡ ಎ.ಲೋಕೇಶಗೌಡ ಟ್ರೋಫಿ- 2025 ಯನ್ನು ವಿಜೇತ ತಂಡಕ್ಕೆ ವಿತರಿಸಿ ಮಾತನಾಡಿದ ಅವರು, ವ್ಹಾಲಿಬಾಲ್ ಕ್ರೀಡೆಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ ಎಂದು ಅವರು ತಿಳಿಸಿದರು.
ವ್ಹಾಲಿಬಾಲ್ ಕ್ರೀಡೆಯನ್ನು ಹೆಮ್ಮರವಾಗಿ ಬೆಳೆಸಬೇಕೆಂಬ ಸಂಕಲ್ಪ ನಮ್ಮ ಅಸೋಸಿಯೇಷನ್ ಕಾರ್ಯಸೂಚಿಗಳನ್ನು ಒಳಗೊಂಡಿದೆ. ನಗರ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಈ ಕ್ರೀಡೆಯನ್ನು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಸಬೇಕಿದೆ. ಈ ದಿಸೆಯಲ್ಲಿ ನಮ್ಮ ಅಸೋಸಿಯೇಷನ್ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶವನ್ನು ಕೊಡಬೇಕು. ಹೊಸ ಪ್ರತಿಭೆಗಳನ್ನು ಅನ್ವೇಷಣೆ ಮಾಡಿ ಅಂತಹವರನ್ನು ಗುರುತಿಸುವ ಕೆಲಸವನ್ನು ನಮ್ಮ ಸಂಸ್ಥೆಯು ಮಾಡುತ್ತಿದೆ ಎಂದು ಅವರು ಹೇಳಿದರು.
*ಪುರುಷ ವಿಭಾಗದಲ್ಲಿ ಆಳ್ವಾಸ್ ಚಾಂಪಿಯನ್*
ಸೆ. 14 ರಿಂದ ಸೆ. 20 ರ ವರೆಗೆ ನಡೆದಿರುವ ಕರ್ನಾಟಕ ಹಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 44 ಪಂದ್ಯಗಳು ನಡೆದಿದ್ದು, ಇದರಲ್ಲಿ 10 ಮಹಿಳಾ ತಂಡಗಳು ಮತ್ತು 12 ಪುರುಷ ತಂಡಗಳು ಭಾಗವಹಿಸಿದ್ದವು.
ಪುರುಷರ ವಿಭಾಗದಲ್ಲಿ ಮಂಗಳೂರು ಆಳ್ವಾಸ್ ತಂಡವು ಕರ್ನಾಟಕ ಪೊಲೀಸ್ ತಂಡವನ್ನು 3-1 ಸೆಟ್ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.
ಅದರಂತೆ ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ಇನ್ ಕಂ ಟ್ಯಾಕ್ಸ್ ತಂಡವು ಕರ್ನಾಟಕ ಪೊಸ್ಟಲ್ ತಂಡವನ್ನು 3-1 ಸೆಟ್ ಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಮಾರೋಪದಲ್ಲಿ ಭಾಗವಹಿಸಿ ಚಾಂಪಿಯನ್ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಕೆವ್ಹಿಎ ಅಧ್ಯಕ್ಷ ಕಾರ್ತಿಕರೆಡ್ಡಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಬಸವರಾಜ ಓ.ಸಿ, ರಾಜುಗೌಡ, ಬಿ.ಎಂ.ಕೊಕ್ರೆ,ಡಾ. ಸುಬ್ರಮಣಿ, ಇಬ್ರಾಹಿಂ, ವಾಲಿಬಾಲ್ ತರಬೇತುದಾರ ನಂಜೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಲಕ್ಷ್ಮೀ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.