ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕಾಗವಾಡ ಕ್ಷೇತ್ರಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಸಚಿವ ಸತೀಶ ಜಾರಕಿಹೊಳಿ, ಶಾಸಕ ರಾಜು ಕಾಗೆ , ಶ್ರೀಮಂತ ಪಾಟೀಲರು, ಶ್ರೀನಿವಾಸ ಪಾಟೀಲರೊಂದಿಗೆ ಚರ್ಚೆ ನಡೆಸಲಾಯಿತು. ಸಚಿವ ಸತೀಶ್ ಜಾರಕಿಹೊಳಿಯವರು ಶ್ರೀನಿವಾಸ ಪಾಟೀಲ ಅವರಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸೂಚಿಸಿದರು. ಹಾಗಾಗಿ, ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ರಾಜು ಕಾಗೆ ಅವರು ಹಿರಿಯ ರಾಜಕಾರಣಿ. ಅನುಭವ ಹೊಂದಿದವರು. ಆ ಭಾಗದ ಶಾಸಕರಿಗೆ ಅವಕಾಶ ನೀಡುವಂತೆ ನೀಡಿದ ಸಲಹೆ ಮೇರೆಗೆ ಶ್ರೀನಿವಾಸ ಪಾಟೀಲ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು. ಶ್ರೀನಿವಾಸ ಅವರಿಗೆ ಮುಂದೆ ಸಾಕಷ್ಟು ಅವಕಾಶಗಳಿವೆ ಎಂದರು.
ಕಾಗವಾಡ ತಾಲೂಕಿನಲ್ಲಿ ಎಲ್ಲರೂ ಸೇರಿ ತಾಲೂಕಿನ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಈಗಾಗಲೇ ನಮ್ಮ ಪೆನಲ್‌ದಿಂದ 7 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 7 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ದೇವರು ಮತ್ತು ಜನರ ಆಶೀರ್ವಾದದಿಂದ ನಮ್ಮ ಪೆನಲ್ ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.