
ಮೂಡಲಗಿ: – ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರುವ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರದಂದು ಹೊರವಲಯದ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆಯೂ ಅವರು ಸೂಚಿಸಿದರು.
ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ ಇಲ್ಲವೇ ಜನವರಿ ತಿಂಗಳಲ್ಲಿ ಚುನಾವಣೆಯು ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಬೇಗನೇ ಮುಗಿಸಬೇಕು. ಸಾರ್ವಜನಿಕರ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಸ್ಥಾನಿಕವಾಗಿ ಜನರ ಮೂಲಭೂತ ಸೌಕರ್ಯಗಳನ್ನು ನೀಗಿಸಲು ಮುಂದಾಗುವಂತೆ ಸೂಚಿಸಿದ ಅವರು, ಜನರಿಗೆ ತೊಂದರೆಯಾಗದಂತೆ ಕೆಲಸವನ್ನು ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅರಭಾವಿ ಕ್ಷೇತ್ರದ ಸುಮಾರು 20 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಇದಕ್ಕಾಗಿ ನೀರಾವರಿ ಇಲಾಖೆಯಿಂದ ಮೊದಲ ಹಂತದ ಕಾಮಗಾರಿಗಾಗಿ ಸುಮಾರು 192.30 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಪ್ರಸ್ತುತ 7 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯು ಪ್ರಗತಿಯಲ್ಲಿದೆ. ಎರಡನೇ ಹಂತದ 13 ಕೆರೆಗಳನ್ನು ತುಂಬಿಸಲಿಕ್ಕೆ 131.57 ಕೋಟಿ ರೂಪಾಯಿ ಅನುದಾನವು ಬರಬೇಕಿದೆ. ಮುಂದಿನ 2026 ನೇ ಸಾಲಿನಲ್ಲಿ ಮೊದಲ ಹಂತದ ಕಾಮಗಾರಿಗಳು ಮುಗಿಯಲಿದ್ದು, ಎರಡನೇ ಹಂತದ ಕಾಮಗಾರಿಗಳು ಮುಗಿಯಲಿಕ್ಕೆ ಎರಡು ವರ್ಷಗಳು ಬೇಕಾಗಬಹುದು. ಈಗೀರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಆರ್ಡಿಪಿಆರ್ ಇಲಾಖೆಯ ಅನುದಾನದಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 475 ಕೋಟಿ ರೂಪಾಯಿ ಬಿಡುಗಡೆಗೊಂಡಿದ್ದು, 388 ಕೋಟಿ ರೂಪಾಯಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರಿಂದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಸುಮಾರು 148 ಜನ ವಸತಿಗಳಿಗೆ ಅನುಕೂಲವಾಗಲಿದೆ.ಇದನ್ನು ಸಹ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ 30 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇನ್ನೂ 20ಕೋಟಿ ರೂಪಾಯಿ ಅನುದಾನ ಬರಬೇಕಿದೆ. ಈ ಅನುದಾನವು ಬೇಗನೇ ಬಿಡುಗಡೆಯಾದರೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮೇಲಾಧಿಕಾರಿಗಳಿಗೆ ಅಗತ್ಯವಿರುವ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕಚೇರಿಗಳ ಅಲೆದಾಟವನ್ನು ತಪ್ಪಿಸಲು ಆದಷ್ಟೂ ಸ್ಥಾನಿಕವಾಗಿ ಅವರ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸಿದ ಅವರು, ರೈತಾಪಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆಯಿಂದ ರೈತರು ತೊಂದರೆಗಳನ್ನು ಅನುಭವಿಸಬಾರದು. ರೈತರಿಗೆ ತೊಂದರೆಗಳು ಆದರೆ ನಾನು ಸಹಿಸುವುದಿಲ್ಲ. ಅಧಿಕಾರಿಗಳೇನೂ ಮೇಲಿನಿಂದ ಬಿದ್ದಿಲ್ಲವೆಂದು ಅವರು ಖಡಕ್ ವಾರ್ನಿಂಗ್ ಮಾಡಿದರು.
ಇದೇ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
IN MUDALGI Latest Kannada News