
ಮೂಡಲಗಿ 14: ಸರಕಾರಿ ಶಾಲೆಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಭವಿಷ್ಯ ನಿರ್ಮಿಸಿಕೊಳ್ಳುವದು ಅವಶ್ಯಕವಾಗಿದೆ ಎಂದು 8 ನೇ ತರಗತಿಯ ವಿದ್ಯಾರ್ಥಿನಿ ಸೇವಂತಿ ಹಿರೇಹೊಳಿ ಹೇಳಿದರು. ಅವರು ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದು ಸರಕಾರಿ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಹೀಗಿರುವಾಗ ವಿದ್ಯಾರ್ಥಿಗಳ ಕಲಿಕೆಗೆ ನಮ್ಮ ಬಡತನ ಅಡ್ಡಿಯಾಗುವದಿಲ್ಲ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಒಳ್ಳೆಯ ಭವಿಷ್ಯ ನಿರ್ಮಿಸಿಕೊಂಡು ನಮ್ಮ ಕುಟುಂಬಕ್ಕೆ, ಗ್ರಾಮಕ್ಕೆ ಕೀರ್ತಿ ತರಬೇಕಾಗಿದೆ ಎಂದು ಹೇಳಿದರು.

ಪಾಲಕರ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸುನಂದಾ ಭಜಂತ್ರಿ ಮಾತನಾಡಿ ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ಅರಭಾಂವಿ ಕ್ಷೇತ್ರದ ಶಾಸಕರ ಪ್ರಯತ್ನದ ಫಲದಿಂದ ಪ್ರೌಢಶಾಲೆ ಮಂಜೂರಾಗಿ ಬಡಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಎಂದರು. ಇಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವದು ಶ್ಲಾಘನೀಯ ಎಂದರು.
ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಸತೀಶ ಬಿ.ಎಸ್. ಮಾತನಾಡಿ ಇದೇ ವರ್ಷ ತುಕ್ಕಾನಟ್ಟಿಗೆ ಪ್ರೌಢಶಾಲೆ ಮಂಜೂರಾಗಿದ್ದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದಕ್ಕೆ ಹಾಗೂ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪಾಲಕರ ಸಹಕಾರ ಅವಶ್ಯಕವಾಗಿದೆ ಎಂದರು,
ಪ್ರಧಾನ ಗುರುಗಳಾದ ಎ.ವ್ಹಿ. ಗಿರೆಣ್ಣವರ ಮಾತನಾಡಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಂದೇ ಪಾಲಕ ಪೋಷಕರ ಮಹಾಸಭೆ ನಡೆಸಿ ಶಿಕ್ಷಕ ಪೋಷಕ ವಿದ್ಯಾರ್ಥಿ ಸಂಗಮದಿಂದ ಕಲಿಕೆಯ ಬಗ್ಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾರ್ಥಿ ನಾಯಕರು ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಸಾರಥ್ಯವನ್ನು ಮಕ್ಕಳೇ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಪಾಲಕರು ಈ ಸಂದರ್ಭದಲ್ಲಿ ಪ್ರತಿ ತರಗತಿಯ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಪ್ರಗತಿಯ ಬಗ್ಗೆ ಚರ್ಚಿಸಿದರು. ಪಾಲಕರ ಕಾರ್ಯಕ್ರಮವನ್ನು ಪಾಲಕರಾದ ಗುರುನಾಥ ಹುಕ್ಕೇರಿ, ಗುರುನಾಥ ಉಪ್ಪಾರ, ಸುಧಾಕರ ಗದಾಡಿ, ತಿಪ್ಪಣ್ಣ ಹುಲಕುಂದ, ಪುಂಡಲೀಕ ಅರಬಾಂವಿ, ಡಾ. ನಾಯಿಕವಾಡಿ ಉದ್ಘಾಟಿಸಿದರು. ವಿದ್ಯಾರ್ಥಿ ನಾಯಕರಾದ ದರ್ಶನ, ಸುಪ್ರಿತಾ, ಸಂದೀಪ, ಮಧು, ಕೀರ್ತಿ, ಉತ್ಕಲಾ ಹಾಗೂ ಶಿಕ್ಷಕರಾದ ವಿಮಲಾಕ್ಷಿ ತೋರಗಲ, ಮಹಾದೇವ ಗೋಮಾಡಿ, ಲಕ್ಷ್ಮೀ ಹೆಬ್ಬಾಳ, ಭಾಗೀರಥಿ ಕಳ್ಳಿಗುದ್ದಿ ಮುಂತಾದವರು ಹಾಗೂ ಗ್ರಾ.ಪಂ. ಸದಸ್ಯರು, ನೂರಾರು ಸಂಖ್ಯೆಯ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಹಾಗೂ 500 ಪಾಲಕರಿಗೆ ಅಕ್ಷರದಾಸೋಹ ಕಾರ್ಯಕ್ರಮದಲ್ಲಿ ಬದಾಮಪುರಿ, ಚಪಾತಿ ಬೇಳೆಪಲ್ಯ ಮೊಸರು ಸೇಂಗಾ ಹಿಂಡಿ ಜೀರಾ ರೈಸ್ ಮಸಾಲೆ ಸಾಂಬಾರ ನೀಡಲಾಯಿತು.
IN MUDALGI Latest Kannada News