
ಮೂಡಲಗಿ: ಎಲ್ಲ ಜಾತಿ- ಜನಾಂಗಗಳ ಮಹಾನ್ ಪುರುಷರ ಜಯಂತಿ ಆಚರಣೆಗಳು ಒಂದೇ ವೇದಿಕೆಯಲ್ಲಿ ಅದೂ ಸರ್ವ ಸಮಾಜಗಳ ಬಂಧುಗಳ ಉಪಸ್ಥಿತಿಯಲ್ಲಿ ಅತೀ ಅದ್ದೂರಿಯಿಂದ ನಡೆಯಲು ಕಾರಣೀಕರ್ತರಾದ ಎಲ್ಲ ಸಮಾಜಗಳ ಮುಖಂಡರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಭಿನಂದನೆ ಸಲ್ಲಿಸಿ, ಪ್ರತಿ ವರ್ಷವೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು
ಪಟ್ಟಣದ ಬಸವ ಮಂಟಪದಲ್ಲಿ ಗುರುವಾರ ಸಂಜೆ ಜರುಗಿದ ಕನ್ನಡ ಹಬ್ಬ, ಸರ್ವ ಧರ್ಮ- ಸಮಾಜಗಳ ಸತ್ಪುರುಷರ ಜಯಂತ್ಯೋತ್ಸವದ ಭಾವೈಕ್ಯತೆಯ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ನವೆಂಬರ್ ತಿಂಗಳಿನಲ್ಲಿ ಕನ್ನಡ
ರಾಜ್ಯೋತ್ಸವದ ಜತೆಗೆ
ಎಲ್ಲ ಜಾತಿಗಳ ಮಹಾನ್ ಪುರುಷರ ಜಯಂತಿಯನ್ನು ಆಚರಿಸುವ ಹೊಸ ಸಂಪ್ರದಾಯವನ್ನು ಮುಂದುವರೆಸಿಕೊಂಡು, ಎಲ್ಲ ಸಮುದಾಯದವರ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ತರದೇ, ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ಮಾಡುತ್ತೇನೆಂದು ತಿಳಿಸಿದರು.
ಮಹಾನ್ ಸಂತರು, ದಾರ್ಶನಿಕರಿಗೆ ಗೌರವ ನೀಡುವ ಕೆಲಸವಾಗಬೇಕಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ. ಅಲ್ಪ ಅವಧಿಯಲ್ಲಿ ಭಾವೈಕ್ಯತೆಯನ್ನು ಸಾರುವ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮೂಡಲಗಿ- ಗೋಕಾಕ ತಾಲ್ಲೂಕು ವಿಶಿಷ್ಟ ದಾಖಲೆಯನ್ನು ಮಾಡಿದೆ. ಆದರೆ ಕೆಲವು ದುಃಖಕರ ಘಟನೆಯೂ ಮಧ್ಯ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಕಳೆದ ಬುಧವಾರ ರಾತ್ರಿ ನನ್ನ ಹಿರಿಯ ಅಕ್ಕನ ನಿಧನದಿಂದ ಈ ಕಾರ್ಯಕ್ರಮವನ್ನು ಮುಂದೂಡುವಂತೆಯೂ ಕೆಲವು ಹಿತೈಷಿಗಳು ಸಲಹೆಯನ್ನು ನೀಡಿದರು. ಆದರೆ, ನಿಗದಿಯಾಗಿದ್ದ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ರದ್ದಾಗಬಾರದು. ಇದರಿಂದ ಜನರ ಮನಸ್ಸಿಗೆ ನೋವುಂಟು ಮಾಡಬಾರದೆನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶೋಕದ ಮಧ್ಯವೂ ನಡೆಸಿದ್ದೇವೆ ಎಂದು ನೋವಿನಿಂದ ತಿಳಿಸಿದರು.
*ಜನರೇ ನನ್ನಾಸ್ತಿ ಎಂದ ಬಾಲಚಂದ್ರ*
ಕಳೆದ 25 ವರ್ಷಗಳಿಂದ ನಮ್ಮ ಕುಟುಂಬವನ್ನು ಮನಸಾರೆಯಿಂದ ಪ್ರೀತಿಸಿ ಆಶೀರ್ವಾದ ಮಾಡುತ್ತ ಬರುತ್ತಿದ್ದೀರಿ. ನೀವೇ ನಮಗೆ ದೊಡ್ಡ ಶಕ್ತಿಯಾಗಿದ್ದೀರಿ. ಜತೆಗೆ ದೊಡ್ಡ ಆಸ್ತಿಯಾಗಿದ್ದೀರಿ. ಅರಭಾವಿ, ಗೋಕಾಕ, ಯಮಕನಮರಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನಮಗೆ ಹರಿಸಿ ಗೆಲ್ಲಿಸುತ್ತ ಬಂದಿದ್ದೀರಿ. ಈ ನಿಮ್ಮ ಉಪಕಾರವನ್ನು ನಾವೆಂದಿಗೂ ಮರೆಯುವದಿಲ್ಲ. ಅಭಿವೃದ್ಧಿ ಕಾರ್ಯಗಳು, ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ದೊರಕಿಸಿಕೊಡುವ ಮೂಲಕ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಹೇಳಿದರು.
*ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳಲ್ಲೂ ಜಯ ನಮ್ಮದೇ*
ಇಚೆಗೆ ನಡೆದಿರುವ ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಬೆಂಬಲಿಗರಿಗೆ ಅಧಿಕಾರ ಸಿಕ್ಕಿದೆ. ಈ ಮೂಲಕ ಜಿಲ್ಲೆಯಲ್ಲಿ ಸಹಕಾರಿ ವಲಯದಲ್ಲೂ ನಮ್ಮದೇ ಪಾರುಮತ್ಯವನ್ನು ಸಾಧಿಸಿದ್ದೇವೆ, ಹಾಲು ಒಕ್ಕೂಟ, ಮಾರ್ಕೆಟಿಂಗ್ ಸೊಸೈಟಿ, ಎಸ್ಎಲ್ಡಿಪಿ, ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಜನರ ಆಶೀರ್ವಾದದಿಂದ ನಮ್ಮ ಟೀಂಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ. ಮುಂದೆಯೂ ಅಪೆಕ್ಸ್ ಬ್ಯಾಂಕಿಗೆ ನಮ್ಮವರೇ ಆಗುತ್ತಾರೆ ಎಂದರು.
*ಎಲ್ಲ ಸಮುದಾಯಕ್ಕೆ ಅಧಿಕಾರ ಹಂಚಿಕೆ*
ಸಹಕಾರಿ ಕ್ಷೇತ್ರ ಇರಬಹುದು, ಆರ್ಡಿಪಿಆರ್ ಇರಬಹುದು. ಬಹುತೇಕ ಎಲ್ಲ ಸಮುದಾಯದವರಿಗೆ ಅಧಿಕಾರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾ.ಪಂ. ಜಿ.ಪಂ. ಚುನಾವಣೆಯಲ್ಲಿಯೂ ಆಯಾ ಸಮಾಜಗಳಿಗೆ ಸೂಕ್ತ ಪ್ರಾಶಸ್ತ್ಯವನ್ನು ದೊರಕಿಸಿಕೊಡಲು ಪ್ರಾಮಾಣ ಪ್ರಯತ್ನ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಕೆಲ ಸಮಾಜಗಳಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲವರಿಗೆ ಬೇಸರ ಆಗಿರಬಹುದು. ಇದನ್ನೇ ಕೆಟ್ಟದೆಂದು ಭಾವಿಸದೇ ನಮ್ಮ ಜತೆಯಾಗಿ ನಿಲ್ಲಿರಿ.ಹಿಂದೆ ಆಗಿರುವ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಹೋಗೋಣ.ನಮ್ಮಿಂದ ಯಾವ ಕಾರಣಕ್ಕೂ ಜನರಿಗೆ ಅನ್ಯಾಯ ಆಗುವದಿಲ್ಲ. ಜನರಿಂದಲೇ ನಾವು ಮುಂದೆ ಬಂದಿದ್ದೇವೆ. ಜನರ ಋಣ ನಮ್ಮ ಮೇಲಿದೆ. ವ್ಯತ್ಯಾಸಗಳನ್ನು ಮರೆತು ನಮ್ಮ ಜೊತೆಯಾಗಿ ನಿಲ್ಲುವಂತೆಯೂ ಅಸಮಾಧಾನಿತರಿಗೆ ಸಂದೇಶವನ್ನು ರವಾನಿಸಿದರು.
*2028 ಕ್ಕೆ ನಮಗೆ ಹೆಚ್ಚಿನ ಶಕ್ತಿ ನೀಡಿ*
ಮುಂದೆ ನಡೆಯುವ 2028 ರ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಿ. ನಾವಷ್ಟೇ ಅಲ್ಲ. ನಮ್ಮ ಬೆಂಬಲದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಇದರಿಂದ ಜನರಿಗೆ ಒಳ್ಳೆಯದಾಗುತ್ತದೆ. ನಮಗಷ್ಟೇ ಅಲ್ಲ. ಇಡೀ ರಾಜ್ಯಕ್ಕೂ ಒಳ್ಳೆಯದಾಗಲಿದೆ. ಜತೆಗೂ ನಾಡು ಅಭಿವೃದ್ಧಿಯಾಗಲಿದೆ ಎಂದು ಹೇಳುವ ಮೂಲಕ ಮುಂದಿನ ವಿಧಾನಸಭಾ
ಚುನಾವಣೆಯಲ್ಲಿಯೂ ನಾವೇ ಕಿಂಗ್ ಮೇಕರ್ ಆಗುತ್ತೇವೆ ಎಂದು ಆಶಯವನ್ನು ವ್ಯಕ್ತಪಡಿಸಿದರು. ನೀವು ಗಟ್ಟಿಯಾಗಿ ನಿಮ್ಮ ಶಕ್ತಿಯನ್ನು ನನಗೆ ಕೊಟ್ಟರೆ, ಆ ಶಕ್ತಿಯನ್ನು ನಿಮಗೆ ಮರಳಿ ಕೊಡುತ್ತೇನೆ ಎಂದು ಹೇಳಿದರು.
ರೈತರು ಬೆಳೆದ ಬೆಳೆಯು ಹಾನಿಯಾಗದಂತೆ ನೀರಿನ ಅವಶ್ಯಕತೆವಿರುವ ಕಡೆಗಳಲ್ಲಿ ಸಮಯಕ್ಕೆ ಸರಿಯಾಗಿ ನಿಯಮಿತವಾಗಿ ಕಾಲುವೆಗಳಿಗೆ ನೀರು ಬಿಡಿಸಿ ರೈತರ ಕಾಳಜಿಯು ನಮ್ಮ ಮೊದಲ ಆದ್ಯತೆಯಾಗಿದೆ. ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ವಿವಿಧ ವಸತಿ ಶಾಲೆಗಳು, ಸರ್ಕಾರಿ ಪ್ರೌಢಶಾಲೆಗಳು, ಪಪೂ ವಿದ್ಯಾಲಯಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಶಿಕ್ಷಣವನ್ನು ಹಳ್ಳಿ- ಹಳ್ಳಿಗಳ, ಮನೆ- ಮನೆಗಳಿಗೆ ತಲುಪಿಸುವ ಕಾರ್ಯ ನಿರಂತರವಾಗಿರುತ್ತದೆ ಎಂದು ಹೇಳಿದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಪ್ರೀತಿ, ಅಭಿಮಾನವನ್ನು ಹೊಂದಬೇಕು. ಪ್ರತಿ ವರ್ಷವೂ ಭಾವೈಕ್ಯತೆಯ ಸಮಾವೇಶದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರಭಾ ಶುಗರ್ಸ್ ಅಧ್ಯಕ್ಷ ಸಿದ್ಲಿಂಗಪ್ಪ ಕಂಬಳಿ, ಬೆಮುಲ್ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಬಸವರಾಜ ಮಾಳೇದವರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ,ಘಯೋಮನೀಬಸಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ವಿಠ್ಠಲ ಪಾಟೀಲ, ಜಿ.ಪಂ. ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಗೋವಿಂದ ಕೊಪ್ಪದ, ಭೀಮಶಿ ಮಗದುಮ್ಮ, ಶಂಕರ ಬಿಲಕುಂದಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಮುತ್ತೆಪ್ಪ ಕುಳ್ಳೂರ, ಎಸ್ಎಲ್ಡಿಪಿ ನಿರ್ದೇಶಕ ರಾಜು ಬೈರುಗೋಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ರವಿ ಸೋನವಾಲಕರ, ಅನ್ವರ ನದಾಫ, ಮರೆಪ್ಪ ಮರೆಪ್ಪಗೋಳ, ಚಂದ್ರು ಬೆಳಗಲಿ, ಡಾ. ಎಸ್.ಎಸ್. ಪಾಟೀಲ, ಶಿವಲಿಂಗ ಪೂಜೇರಿ, ಪುಟ್ಟಣ್ಣ ಪೂಜೇರಿ, ಮಹಾದೇವ ಪತ್ತಾರ, ಶ್ರೀಶೈಲ ಭಜಂತ್ರಿ, ಪಿ.ಎಲ್.ಬಬಲಿ, ಹಣಮಂತ ಡೊಂಬರ, ರಾಮು ಜಂಡೇಕುರುಬರ, ಹಣಮಂತ ಗುಡ್ಲಮನಿ, ಸತ್ತೆಪ್ಪ ಕರೆವಾಡಿ, ರಮೇಶ ಮಾದರ, ಅಮೃತ ದಪ್ಪಿನವರ, ಅರಭಾವಿ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಸಿದ್ದಪ್ಪ ಹಂಜಿ, ಭೂತಪ್ಪ ಗೋಡೇರ,
ವಿವಿಧ ಸಮುದಾಯಗಳ ಪ್ರಮುಖರು, ಜನ ಪ್ರತಿನಿಧಿಗಳು, ಸಹಕಾರಿ ಮುಖಂಡರು, ಕಸಾಪ ಪದಾಧಿಕಾರಿಗಳು, ಕನ್ನಡ ಪರ ಕಾರ್ಯಕರ್ತರು,
ಉಪಸ್ಥಿತರಿದ್ದರು.

*ಗಮನಸೆಳೆದ ಕಲಾ ಮೆರವಣಿಗೆ*
ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವ ರಂಗಮಂಟಪದವರೆಗೆ ನಾಡದೇವತೆ ಭುವನೇಶ್ವರಿಯ ಮೆರವಣಿಗೆಯು ಜರುಗಿತು. ಮೆರವಣಿಗೆಯಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲಾತಂಡಗಳು ಎಲ್ಲರ ಗಮನಸಳೆದವು. ಮೆರವಣಿಗೆಯುದ್ದಕ್ಕೂ ಕನ್ನಡ ಬಾವುಟಗಳ ಹಾರಾಟ, ಕನ್ನಡ ಪರ ಘೋಷಣೆಗಳು ಮೊಳಗಿದವು. ಗೊಂಬೆ ಕುಣಿತು, ಜಗ್ಗಲಗಿ ವಾದನ, ಡೊಳ್ಳು ಕುಣಿತ, ಶಯನಾಯಿ ವಾದನಗಳಿಂದ ಮೆರವಣಿಗೆಯು ಕಳೆಕಟ್ಟಿತ್ತು.
ಮೂಡಲಗಿ ತಾಲ್ಲೂಕು ಕೇಂದ್ರಕ್ಕೆ ಮಿನಿ ವಿಧಾನ ಸೌಧ ಮತ್ತು ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮಂಜೂರಾಗಿದೆ. ಈ ಮೂಲಕ ಸಾರ್ವಜನಿಕರಿಗೆ ವಿಧಾನಸೌಧದ ಒಂದೇ ಕಟ್ಟಡದಲ್ಲಿ ಎಲ್ಲ ಸರ್ಕಾರಿ ಕೆಲಸಗಳನ್ನು ಮಾಡಿಕೊಡಲಿಕ್ಕೆ ಅನುಕೂಲವಾಗಲಿದೆ. ಮೂಡಲಗಿ ತಾಲ್ಲೂಕಿನಲ್ಲಿ ಅಭಿವೃದ್ಧಿಗೆ ಸದಾ ಬದ್ಧನಿರುವೆ. ಸುಂದರ ತಾಲ್ಲೂಕು ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿರುವೆ.
*-ಬಾಲಚಂದ್ರ ಜಾರಕಿಹೊಳಿ*
*ಶಾಸಕರು, ಬೆಮುಲ್ ಅಧ್ಯಕ್ಷರು*
IN MUDALGI Latest Kannada News