ಚಳಿ..ಚಳಿ..ತಾಳೇನೂ ಈ ಚಳಿಯಾ.!
ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ
ವರದಿ *ಅಡಿವೇಶ ಮುಧೋಳ.
ಬೆಟಗೇರಿ:ಕಳೆದ ಐದಾರು ದಿನಗಳಿಂದ ವಿಪರೀತ ಬೀಸುತ್ತಿರುವ ಶೀತಗಾಳಿಗೆ ತೀವ್ರಗೊಂಡ ಮೈಕೊರೆಯುವ ಚುಮು ಚುಮು ಚಳಿ(ಥಂಡಿ) ಹೆಚ್ಚಾದ ಪರಿಣಾಮ ಗೋಕಾಕ ತಾಲೂಕಿನ ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಜನ ಜೀವನವನ್ನು ತತ್ತರಗೊಳಿಸಿದೆ.
ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಡಿ.15ರಂದು ರಾತ್ರಿ 10:30ಕ್ಕೆ ಸುಮಾರು 14 ಡಿಗ್ರಿ ಸೆಲ್ಸಿಯಸ್ ಮಂಗಳವಾರ ಬೆಳಗ್ಗೆ 6ಗಂಟೆಗೆ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾದ ಪ್ರಮಾಣದ ಚಳಿ ಇತ್ತು.
ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ಡಿ.16 ರಂದು ಬೆಳಗ್ಗೆ 6 ಗಂಟೆಗೆ ಉರಿ(ಬೆಂಕಿ) ಹಚ್ಚಿಕೊಂಡು ತಮ್ಮ ದೇಹದ ಅಂಗಗಳನ್ನು ಕಾಯಿಸಿಕೊಳ್ಳುತ್ತಿರುವದು, ಸ್ಥಳೀಯ ವೃದ್ಧರು, ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ಸಾರ್ವಜನಿಕರು ಬೆಚ್ಚಗಿನ ಉಡುಪುಗಳನ್ನು ಧರಿಸಿ ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು.
ಸ್ಥಳೀಯ ಯುವಕರು, ವೃದ್ಧರು ಗ್ರಾಮದ ಅಲ್ಲಲ್ಲಿ ತ್ಯಾಜ್ಯ ಕಾಗದ, ಕಬ್ಬಿನ ರವದಿ, ಮರದ ಸಣ್ಣ ತುಂಡುಗಳ ಸೇರಿಸಿ ಉರಿ(ಬೆಂಕಿ)ಹಚ್ಚಿಕೊಂಡು ಉರಿ ಝಳದಿಂದ ತಮ್ಮ ದೇಹದ ಅಂಗಗಳನ್ನು ಕಾಯಿಸಿ(ಬೆಚ್ಚಗೆ ಮಾಡಿ)ಕೊಳ್ಳುತ್ತಿರುವದು ಕಂಡು ಬಂತು. ಕಳೆದ ಒಂದು ವಾರದಿಂದ ಪ್ರತಿ ದಿನ ಸಂಜೆ 6:30 ಗಂಟೆಗೆ ಮತ್ತು ಬೆಳಗ್ಗೆ 5 ಗಂಟೆಗೆ ಎದ್ದು ಕೊಡಲೇ ಈ ವಿಪರೀತ ಶೀತಗಾಳಿ ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಥಂಡಿ(ಚಳಿ)ಗೆ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲಾ, ಹೀಗೆ ಚಳಿ ಮತ್ತು ವಿಪರೀತ ಶೀತಗಾಳಿ ಬೀಸಿದರೇ ನಾವು ಹೇಂಗ್ ಕೆಲಸ ಮಾಡುವುದು ಅಂಬುವುದು ತಿಳಿದಂಗ ಆಗೈತಿ ಅಂತಾ ಕಳೆದ ಐದಾರು ದಿನ ಸೇರಿದಂತೆ ಡಿ.14 ಮತ್ತು ಡಿ.15ರಂದು ಸಂಜೆ 7 ಗಂಟೆಗೆ ಚುಮು ಚುಮು ಚಳಿ ಕುರಿತು ಸ್ಥಳೀಯ ಕೂಲಿ ಕಾರ್ಮಿಕ ಕಬ್ಬು ಕಟಾವು ಗ್ಯಾಂಗ್ ಮುಖಂಡ ಭೀಮಶಿ ಮೇಲ್ಮಟ್ಟಿ ಹಾಗೂ ಸಂಗಡಿಗರು ಹೇಳುವ ಮಾತಿದು.
“ಕಳೆದ ವರ್ಷದ ಈ ದಿನಗಳಲ್ಲಿ ಇಷ್ಟೂಂದು ಚಳಿ ಇದ್ದಿರಲಿಲ್ಲ, ಈ ವರ್ಷದ ಈ ದಿನಗಳಲ್ಲಿ ಶೀತ ಗಾಳಿ ಬೀಸುವುದರಿಂದ ಭಾರಿ ಪ್ರಮಾಣದಲ್ಲಿ ಚಳಿಯಿದೆ. ಕೈ ಮತ್ತು ಕಾಲು ಬೆರಳಗಳು ಮಣದಾಡುತ್ತಿಲ್ಲಾ, ಹೀಗಾಗಿ ಹೇಂಗ್ ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ”
ಪುಂಡಲೀಕ ಚಿನ್ನನವರ. ಕೂಲಿ ಕಾರ್ಮಿಕ. ಬೆಟಗೇರಿ.ತಾ.ಗೋಕಾಕ
IN MUDALGI Latest Kannada News