ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 11ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು
ಅಧಿಕಮಾಸದ ಪ್ರವಚನ: ಕಾವ್ಯಶ್ರೀ ಅಮ್ಮನವರ ನುಡಿ
‘ಶ್ರೇಷ್ಠವಾದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು’
ಮೂಡಲಗಿ: ‘ಜನ್ಮನೀಡಿದ ತಾಯಿ ಹಾಗೂ ಭೂಮಿತಾಯಿಯನ್ನು ಸರ್ವಕಾಲಿಕವಾಗಿ ಪೂಜಿಸಿ ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು’ ಎಂದು ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ವಿಠ್ಠಲ ಮಂದಿರ ಸಮುದಾಯದ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆತ್ತ ತಾಯಿಯ ಋಣವನ್ನು ತೀರಿಸುವುದು ಅಸಾಧ್ಯವಾದದ್ದು ಎಂದರು.
ಶ್ರೇಷ್ಠವಾದ ಮಾನವ ಜನ್ಮವನ್ನು ಉತ್ತಮ ಆಚಾರ, ವಿಚಾರಗಳ ಮೂಲಕ ಸಾರ್ಥಕಮಾಡಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ ಹಾಗೂ ಕಾಯಕನಿಷ್ಠೆ ಇವು ವ್ಯಕ್ತಿಯನ್ನು ದೊಡ್ಡವನನ್ನಾಗಿಸುತ್ತವೆ ಎಂದರು.
ಪ್ರತಿಯೊಬ್ಬರಲ್ಲಿ ನುಡಿ ನಡೆ ಒಂದೇ ಆಗಿರಬೇಕು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಉತ್ತಮ ಸಮಾಜವನ್ನು ಕಟ್ಟಬೇಕು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಪ್ರವಚನ ನೀಡಿದರು.
ಅತಿಥಿ ಆನಂದರಾವ ನಾಯ್ಕ್, ಹಣಮಂತ ಗೋಡಿಗೌಡರ ಮಾತನಾಡಿದರು.
ವಿಠ್ಠಲ ಮಡಿವಾಳರ, ಲಕ್ಷ್ಮಣ ಬಿ.ಪಾಟೀಲ, ಮಂಜುನಾಥ ಕೆಂಚರಡ್ಡಿ, ಭೀಮಪ್ಪ ನಾಯ್ಕ, ಕಾಶಿನಾಥ ನಾಯ್ಕ ಭಾಗವಹಿಸಿದ್ದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.