ಪಿಎಸ್‍ಐ ಹುದ್ದೆ ನೇಮಕಕ್ಕೆ ಪದವಿ ಅರ್ಹತೆ ಅವಧಿ ವಿಸ್ತರಿಸಲು ಆಗ್ರಹ
ಮೂಡಲಗಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 545 ಸಬ್ ಇನ್ಸ್‍ಪೆಕ್ಟರ್ (ಸಿವಿಲ್) ಹುದ್ದೆಗಳ ಭರ್ತಿಗೆ ಇತ್ತಿಚೆಗೆ ಅಧಿಸೂಚನೆ ಹೊರಡಿಸಿದ್ದು ನಿರುದ್ಯೋಗಿಗಳಿಗೆ ಮತ್ತು ಪೊಲೀಸ್ ಇಲಾಖೆ ಸೇರಬಯಸುವ ಯುವಕರಲ್ಲಿ ಸಂತಸ ತಂದಿದೆ. ಫೆ. 22ಕ್ಕೆ ಆನ್‍ಲೈನ್‍ದಲ್ಲಿ ಅರ್ಜಿ ತುಂಬಲು ಕೊನೆಯ ದಿನವಾಗಿದೆ. ಹುದ್ದೆಗೆ ಬೇಕಾದ ವಿದ್ಯಾರ್ಹತೆಯು ಯುಜಿಸಿ ನಿಯಮಾವಳಿಯ ವಿಶ್ವವಿದ್ಯಾಲಯಗಳಿಂದ ಏಪ್ರಿಲ್ 1, 2020ರ ಒಳಗಾಗಿ ಪದವಿ ಹೊಂದಿರಬೇಕು ಎಂದು ಷರತ್ತು ಇದೆ. ಆದರೆ ಕಳೆದ 2020ರ ಮಾರ್ಚ ತಿಂಗಳದಲ್ಲಿ ಕೊರೊನಾ ಮಾರಿ ವ್ಯಾಪಕತೆಯಿಂದಾಗಿ ಸರ್ಕಾರದ ಕಟ್ಟುನಿಟ್ಟಿನ ಆದೇಶದಿಂದ ಶಾಲೆ, ಕಾಲೇಜುಗಳು ನಡೆಯದೆ ಪರೀಕ್ಷೆಗಳು ಸಹ ಮುಂದೂಡಲ್ಪಟ್ಟಿದ್ದವು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಪದವಿಯನ್ನು ಪಡೆದುಕೊಳ್ಳುವುದರಿಂದ ವಂಚಿತರಾಬೇಕಾಯಿತು. ಸದ್ಯ ಕರೆದಿರುವ ಪಿಎಸ್‍ಐ ಹುದ್ದೆಗೆ ಅರ್ಜಿ ಹಾಕುವುದರಿಂದಲೂ ವಂಚಿತರಾಗಬೇಕಾಗಿದೆ. ಡಿಸೆಂಬರ್ 2020ರ ಒಳಗಾಗಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೂ ಪಿಎಸ್‍ಐ ಹುದ್ದೆಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ತಾಲ್ಲೂಕಿನ ಪದವಿಧರ ಯುವಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.