ಸೇತುವೆ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ಅಜ್ಜರಣಿ ಗ್ರಾಮಸ್ಥರ ಆಗ್ರಹ
ಬನವಾಸಿ: ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದಿಂದ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಅಜ್ಜರಣಿ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ಹಾಗೂ ಕಾವiಗಾರಿಯಿಂದ ಜಮೀನುಗಳಲ್ಲಿ ಜಾಗ ಕಳೆದುಕೊಳ್ಳುವ ರೈತರಿಗೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಗುಡ್ನಾಪೂರ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಜ್ಜರಣಿಯ ಗ್ರಾಮಸ್ಥರು ಶಿರಸಿ ತಹಶೀಲ್ದಾರ ಎಂ.ಆರ್ ಕುಲಕರ್ಣಿ ಅವರಿಗೆ ಇತ್ತಿಚಿಗೆ ಮನವಿ ಸಲ್ಲಿಸಿದರು.
ಮನವಿ ನೀಡಿದ ಗ್ರಾಮ ಪಂಚಾಯತ್ ಸದಸ್ಯ ಸತೀಶ ಗೌಡ ಮಾತನಾಡಿ, ಅಜ್ಜರಣಿ ಗ್ರಾಮಕ್ಕೆ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದಿಂದ 3ಕೋಟಿ 90ಲಕ್ಷ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಕೆಲ ತಿಂಗಳ ಹಿಂದೆ ಸಚಿವ ಶಿವರಾಮ್ ಹೆಬ್ಬಾರ್ ಗುದ್ದಲಿ ಪೂಜೆ ನೇರವೆರಿಸಿದ್ದರು. ನಂತರ ತ್ವರಿತಗತಿಯಲ್ಲಿ ಆರಂಭಗೊಂಡ ಕಾಮಗಾರಿ ಸ್ಥಗಿತ ಗೊಂಡಿದೆ. ಸೇತುವೆ ನಿರ್ಮಾಣಕ್ಕೆ ಬೇಕಾಗುವ ಜಮೀನಿನು ಭೂಸ್ವಾಧೀನಾಧಿಕಾರಿಗಳು ಸರ್ವೇ ಮಾಡಿಕೊಳ್ಳದೇ, ಸೂಕ್ತ ಪರಿಹಾರ ನೀಡದೇ ಕಾಮಗಾರಿ ಕೈಗೊಂಡಿರುವುದರಿಂದ ರೈತರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಸೇತುವೆ ನಿರ್ಮಾಣದ ಪಕ್ಕದಲ್ಲಿ ನೂತನ ಗೌಡ, ಸುಮಿತ್ರಾ ಅಜ್ಜರಣಿ, ನಾಗಮ್ಮ ಚನ್ನಯ್ಯ, ಪ್ರಮೀಳ ಕೆರೆಸ್ವಾಮಿ, ಪುಟ್ಯಾ ಕೆರಿಯ, ಪರಿಶ್ಯಾ ಕೆರಿಯಾ ಎಂಬುವವರ ಜಮೀನು ಇದ್ದು ಸೇತುವೆ ನಿರ್ಮಾಣಕ್ಕೆ ಜಾಗ ನೀಡಲು ಇವರ ಒಪ್ಪಿಗೆಯಿದೆ. ಆದರೆ ಇವರು ಬಿಟ್ಟು ಕೊಡುವ ಜಮೀನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಬೇಡಿಕೆಯಾಗಿದೆ. ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಈ ಭಾಗದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತಿದೆ ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಶಿರಸಿ ತಹಶೀಲ್ದಾರ ಎಂ.ಆರ್ ಕುಲಕರ್ಣಿ ಮಾತನಾಡಿ, ಅಜ್ಜರಣಿ ಗ್ರಾಮದ ಸೇತುವೆ ನಿರ್ಮಾಣ ಕಾಮಗಾರಿಯ ಸಮಸ್ಯೆಯನ್ನು ಬಗೆಹರಿಸಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶಿಲ್ಪಾ ಚನ್ನಯ್ಯ, ಚನ್ನಮ್ಮ ಚನ್ನಯ್ಯ ಗ್ರಾಮಸ್ಥರಾದ ವಿನಾಯಕ ಚನ್ನಯ್ಯ, ಗುತ್ಯಪ್ಪ ಚನ್ನಯ್ಯ, ಗಣಪತಿ ಸಣ್ಣಹೊಳೆಲಿಂಗ, ಮಂಜು ಚನ್ನಯ್ಯ, ಶಾಂತಕುಮಾರ, ಮಂಜಪ್ಪ ಸಣ್ಣಬಂಗಾರಯ್ಯ, ಪ್ರಕಾಶ ಚನ್ನಯ್ಯ, ಅಣ್ಣಪ್ಪ ಚನ್ನಯ್ಯ, U್ಪಣಪತಿ, ಬಸವರಾಜ ಚನ್ನಯ್ಯ ಮತ್ತಿತರರು ಇದ್ದರು.
ಅಜ್ಜರಣಿ ಗ್ರಾಮದ ಸೇತುವೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪುಗಳನ್ನು ತೆಗೆದುಹಾಕಲಾಗಿತ್ತು. ಈಗ ಕಾಮಗಾರಿ ಸ್ಥಗಿತಗೊಂಡು ಅಜ್ಜರಣಿ ಹಾಗು ಮತ್ತುಗುಣಿ ಗ್ರಾಮಸ್ಥರಿಗೆ ಕುಡಿಯುವ ನೀರು ಸ್ಥಗಿತಗೊಂಡಿದೆ. ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ ಶೀಘ್ರವಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ಕುಡಿಯುವ ನೀರಿನ ಪೈಪು ದುರಸ್ಥಿಗೊಳಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಕಲ್ಪಿಸಬೇಕು ಎಂದು ಅಜ್ಜರಣಿ ಹಾಗು ಮತ್ತುಗುಣಿ ಗ್ರಾಮಸ್ಥರು ಒತ್ತಯಿಸಿದರು.