ಮೂಡಲಗಿ: ಅಲ್ಪ ಸಂಖ್ಯಾತರೆಂದರೆ ಕೇವಲ ಮುಸಲ್ಮಾನರೆಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಮುಸ್ಲಿಮ್‍ರ ಜೊತೆ ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ, ಪಾರ್ಸಿ, ಯಹೂದಿ ಮತ್ತು ಲಿಂಗಾಯತರು ಕೂಡ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದು, ಬಿಜೆಪಿ ಸರಕಾರಗಳು ಈ ಎಲ್ಲ ಸಮುದಾಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಆಶ್ರಯದಲ್ಲಿ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯವೆಂದು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ತಪಕೀರ ಹೇಳಿದರು.
ಅವರು ಕೌಜಲಗಿಯಲ್ಲಿ ಅರಭಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕಗಳಿಗೆ ಹೊಸದಾಗಿ ನಿಯುಕ್ತಿಗೊಂಡ ಪದಾಧಿಕಾರಿಗಳಿಗೆ ಆದೇಶ ಪತ್ರ ಮತ್ತು ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಭಾರತೀಯ ಜನತಾ ಪಕ್ಷ ಮತ್ತು ಅದರ ಅಂಗ ಸಂಸ್ಥೆಗಳು ಭಾರತೀಯ ಅಲ್ಪಸಂಖ್ಯಾತರನ್ನು ತೋರಿಸುತ್ತಾ ಬಹುಸಂಖ್ಯಾತ ಹಿಂದುಗಳ ಮನಸ್ಸಿನಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಭಾರತೀಯ ಮುಸ್ಲಿಂರು ಸೌದಿ ಅರೇಬಿಯಾದಿಂದ ಮತ್ತು ಕ್ರಿಶ್ಚಿಯನ್‍ರು ಇಂಗ್ಲಂಡ್, ಅಮೇರಿಕೆಯಿಂದ ಬಂದವರಲ್ಲ. ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ, ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಸಿಖ್ ಇತ್ಯಾದಿ ಅಲ್ಪಸಂಖ್ಯಾತರು ಹಿಂದುಗಳ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಈ ದೇಶದಲ್ಲಿ ಹಲವಾರು ಧರ್ಮ, ಸಾವಿರಾರು ಜಾತಿ ಮತ್ತು ಭಾಷೆಗಳಿದ್ದು, ಈ ವೈವಿದ್ಯತೆಗಳನ್ನು ಮನಗಂಡು ಜಾತ್ಯಾತೀತತೆ ಮತ್ತು ಸಮಾನತೆಯ ಆಶಯಗಳನ್ನು ಒಳಗೊಂಡ ಸಂವಿಧಾನವನ್ನು ಸ್ವೀಕರಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ವ್ಹಿ.ಪಿ.ನಾಯಿಕ, ರವಿ ತುಪ್ಪದ, ಅರಭಾವಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಇನಾಮದಾರ, ಜಿಲ್ಲಾ ಸಂಚಾಲಕ ರವಿ ಮೂಡಲಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟಗುಂದಿಯ ವರ್ಧಮಾನ ಕಮತೆ ಮತ್ತು ಮೂಡಲಗಿಯ ಇಜಾಜಅಹ್ಮದ ಕೊಟ್ಟಲಗಿ ಅವರುಗಳನ್ನು ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿಗೊಳಿಸುವದಾಗಿ ಜಿಲ್ಲಾಧ್ಯಕ್ಷರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಘಟಕಗಳ ಅಧ್ಯಕ್ಷ ಮಂಜು ಮಸಗುಪ್ಪಿ, ಇರ್ಷಾದ ಪೈಲ್ವಾನ್, ಕಾಂಗ್ರೆಸ್ ಮುಖಂಡ ಗುಂಡಪ್ಪ ಕಮತೆ, ಗಿರೀಶ ಕರಡಿ, ಗುರಪ್ಪ ಹಿಟ್ಟಣಗಿ, ವಿರುಪಾಕ್ಷ ಮುಗಳಖೋಡ, ಶಂಕರೆಪ್ಪ ಸಣ್ಣಮೇತ್ರಿ, ಕೌಜಲಗಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮಾಮಸಾಬ ಹುನ್ನೂರ ಮತ್ತಿತರರು ಉಪಸ್ಥಿತರಿದರು.