ಗೋಕಾಕ: ಕರೋನಾ ಸೊಂಕಿಗೆ ತುತ್ತಾದ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಆಸ್ಪತ್ರೆಗಳು ಸಂಬಂಧಿಸಿದವರಿಂದ ಚಿಕಿತ್ಸೆ ವೆಚ್ಚವನ್ನು ಬರಿಸಿಕೊಂಡಿದ್ದಾರೆ. ಸದರಿ ಹಣವನ್ನು ಆಯುಷ್ಯಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸಂದಾಯ ಮಾಡಬೇಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ, ಇದರಿಂದ ಬಡಜನರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಮೇ 29 ರಂದು ಗೋಕಾಕ ತಹಶೀಲ್ದಾರ ಕಚೇರಿಯಲ್ಲಿ ಕೋವಿಡ್-19 ಜಿಲ್ಲೆಗಳಲ್ಲಿ ಸಾಂಕ್ರಾಮಿಕ ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿ, ಮೈಸೂರು, ಹಾಸನ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ನಡೆಸಿದ ವಿಡಿಯೋ ಸಂವಾದ ಭಾಗವಹಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ಸೊಂಕಿನ ಲಕ್ಷಣ ಇರುವ ಜನರನ್ನು ಆರ್.ಟಿ.ಪಿ.ಸಿ.ಆರ್ ಟೆಸ್ಟ್‍ಗೆ ಒಳಪಡಿಸಿದಾಗ ಸಂಬಂಧಿಸಿದವರ ಪರೀಕ್ಷಾ ವರದಿ ಬರಲಿಕ್ಕೆ ತುಂಬಾ ತಡವಾಗುತ್ತದೆ. ಇದರಿಂದ ಚಿಕಿತ್ಸೆ ವಿಳಂಭವಾಗಿ ಸಾವು ನೋವುಗಳು ಹೆಚ್ಚಾಗುತ್ತಿವೆ ಎಂದರು.
ಬೆಳಗಾವಿ ನಗರದಲ್ಲಿ ಮಾತ್ರ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಲ್ಯಾಬ್ ಇದೆ, ಜಿಲ್ಲೆಯ ಗೋಕಾಕ ಮತ್ತು ಚಿಕ್ಕೋಡಿ ನಗರದಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಲ್ಯಾಬ್ ಅನ್ನು ಆರಂಭಿಸಲು ಒತ್ತಾಯಿಸಿದರು. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲದ ಕಾರಣ ಆಸ್ಪತ್ರೆಗಳ ನಿರ್ವಹಣೆ ತುಂಬಾ ಕಷ್ಟದಾಯಕವಾಗಿದ್ದು, ತಕ್ಷಣ ನೇಮಕಾತಿಗೆ ಕ್ರಮವಹಿಸಬೇಕು, ಜೊತೆಗೆ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಅಂತಿಮ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕನಿಷ್ಠ 4 ತಿಂಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮತ್ತು ಯಾವ ಆಸ್ಪತ್ರೆಗೆ ಕಾರ್ಯನಿರ್ವಹಿಬೇಕೆಂದು ಜಿಲ್ಲಾಧಿಕಾರಿಗಳು ವಹಿಸುವಂತೆ ಆದೇಶ ಮುಖ್ಯಮಂತ್ರಿಗಳು ಮಾಡುವಂತೆ ಕೋರಿದರು. ಗೋಕಾಕ ಮತ್ತು ಚಿಕ್ಕೋಡಿ ನಗರಗಳಲ್ಲಿ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಅವರ ಗಮನಕ್ಕೆ ತಂದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಇದ್ದರು.
