ಪತ್ರಕರ್ತರಿಗೆ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣೆ
ಜಾಗೃತಿ ಮೂಡಿಸುವಂತ ಕಾರ್ಯದಲ್ಲಿ ಪತ್ರಕರ್ತರು ಸದಾ ಸಿದ್ದ | ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯ
ಮೂಡಲಗಿ : ಕೊರೋನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.
ಶುಕ್ರವಾರದಂದು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಆಯೋಜಿಸಲಾದ ಮೂಡಲಗಿ ತಾಲೂಕಾ ಪತ್ರಿಕಾ ವರದಿಗಾರರಿಗೆ ಉಚಿತ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿಗಳು ಸಾಕಷ್ಟು ಕಾರ್ಯಗಳು ಮಾಡಿದ್ದಾರೆ. ಅದೇ ರೀತಿ ಪತ್ರಕರ್ತರು ಯಾವತ್ತು ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ ಘಾತುಕ ಘಟನೆ, ಸಾಂಕ್ರಾಮಿಕ ರೋಗಗಳು ಬಂದಾಗ ಪತ್ರಕರ್ತರೇ ನಿರಂತರ ಸುದ್ದಿಯ ಬೆನ್ನುಬೀಳುವವರು ಎಂದರು.
ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರಿಗೆ ಹಾಗೂ ಅನೇಕ ವಾರಿಯರ್ಸ್‍ಗಳಿಗೆ ತಮ್ಮ ಮನೆಯ ಬಗ್ಗೆಯೂ ಚಿಂತೆಯಿರುವುದಿಲ್ಲ. ಕೊರೊನಾ ಮಾಹಾಮಾರಿ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು ಆ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಸದಸ್ಯರಿಗೆ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣೆ ಮಾಡಲು ಉದ್ದೇಶಿಸಿ ನೆರವು ನೀಡಲಾಗುತ್ತಿದೆ ಎಂದರು.
ಮೊದಲಿನಿಂದಲೂ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಸಮಾಜದ ಸ್ತ್ರೀಯರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ಕಾರ್ಯವನ್ನು ಮಾಡುತ್ತಿದೆ, ಪ್ರವಾಹ ಸಂದರ್ಭದಲ್ಲಿ ಸಹ ಅನೇಕ ಸಹಾಯಹಸ್ತ ನೀಡಲಾಗಿದೆ, ಅದೇ ರೀತಿಯಲ್ಲಿ ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿಯೂ ಸಹ ಸಾಕಷ್ಟು ಸಹಾಯಹಸ್ತವನ್ನು ನೀಡುತ್ತಿದೆ ಎಂದರು.
ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಮಾತನಾಡಿ, ಪತ್ರಕರ್ತ ಸದಾ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಿಸುವ ನಿಟ್ಟಿನಲ್ಲಿ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ, ಈ ಯೋಜನೆ ರೂಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ಯೋಜನಾಧಿಕಾರಿ ದೇವರಾಜ, ಗೋಕಾಕ ತಾಲೂಕಿನ ಯೋಜನಾಧಿಕಾರಿ ಸಿದ್ದಾರೋಡ, ಪತ್ರಕರ್ತರಾದ ಎಲ್.ಸಿ.ಗಾಡವಿ, ವಲಯ ಮೇಲ್ವಿಚಾರಕಿ ಮಾನಸಿ ಪಾಟೀಲ, ಸೇವಾಪ್ರತಿನಿಧಿ ಸವಿತಾ ಪೂಜೆರಿ ಹಾಗೂ ಮೂಡಲಗಿ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.