ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾರ್ಯ ಮೆಚ್ಚುವಂತದ್ದಾಗಿದೆ: ಡಾ.ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಈಗಾಗಲೇ ಬೆಟಗೇರಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಬೆಟಗೇರಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಸೋಮವಾರ ಆ.9ರಂದು ನಡೆದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾರ್ಯ ಮೆಚ್ಚುವಂತದ್ದಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಎಲ್ಲರೂ ಒಂದಾಗಿ ಊರಿನ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ ಅವರು ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತಿ 15ನೇ ಹಣಕಾಸಿನ ಯೋಜನೆಯಡಿಯ ಸುಮಾರು 5 ಲಕ್ಷ ರೂ.ಗಳಲ್ಲಿ ಗ್ರಾಮದ ವಿವಿಧಡೆ 3 ಹೈ ಮಾಸ್ಕ್ ನೂತನ ವಿದ್ಯುತ್ ದೀಪಗಳ ನಿರ್ಮಾಣ, ಮತ್ತು ಲಕ್ಷ್ಮೀ ನಗರ ಸಕಿಪ್ರಾ ಶಾಲೆಯಲ್ಲಿ ಸುಮಾರು 3.62 ಲಕ್ಷ ರೂ.ಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಹಾಗೂ ನರೇಗಾ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದ ಸುಮಾರು 10 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ ಅವರು ಗ್ರಾಮದ ವಿವಿಧಡೆ ನೂತನ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ ಪಡೆದ ಮತ್ತು ರಾಷ್ಟ್ರಪತಿಯವರಿಂದ ಕೊಡಲಾಗುವ ಶೌರ್ಯ ಪ್ರಶಸ್ತಿಗೆ ಭಾಜನರಾದ ಸವದತ್ತಿ ಅಗ್ನಿ ಶಾಮಕ ಠಾಣೆಯ ಅಗ್ನಿಶಾಮಕ ಸ್ಥಳೀಯ ಅಶೋಕ ಕೆಂಚಪ್ಪ ವಡೇರ ಅವರನ್ನು ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರು ಇಲ್ಲಿಯ ಗ್ರಾಮ ಪಂಚಾಯತಿ ವತಿಯಿಂದ ಶಾಲು ಹೊದಿಸಿ ಸತ್ಕರಿಸಿದರು.
ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಸುಭಾಷ ಜಂಬಗಿ, ಶಿವನಪ್ಪ ಮಾಳೇದ, ಈಶ್ವರ ಮುಧೋಳ, ಅಶೋಕ ಕೋಣಿ, ಗುರವ್ವ ಕಟ್ಟಿಮನಿ, ಸದಾಶಿವ ಕುರಿ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಬಸವರಾಜ ಪಣದಿ, ರಾಮಣ್ಣ ನೀಲಣ್ಣವರ, ಸುಭಾಷ ಕರೆಣ್ಣವರ, ಹನುಮಂತ ವಡೇರ, ಸಿದ್ದಪ್ಪ ಬಾಣಸಿ, ಆಶೆಪ್ಪಗೋಳ, ವಿಠಲ ಚಂದರಗಿ, ಪಾರ್ವತಿ ಭಜಂತ್ರಿ, ಕಸ್ತೂರಿ ಕಂಬಾರ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.