ಬೆಟಗೇರಿ ಗ್ರಾಮದ ಅಶೋಕ ವಡೇರ ಅವರಿಗೆ ಶೌರ್ಯ ಪ್ರಶಸ್ತಿ
ಬೆಟಗೇರಿ: ಸನ್ 2019 ರಲ್ಲಿ ಧಾರವಾಡದ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 56 ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿ, ತನ್ನ ಪ್ರಾಣದ ಹಂಗು ತೊರೆದು ಸಾಹಸ ಸಾಧನೆ ಮೆರೆದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಶೋಕ ಕೆಂಚಪ್ಪ ವಡೇರ ಅವರಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ.
ಅಲ್ಲದೇ, ಈಗ ರಾಷ್ಟ್ರಪತಿಯವರಿಂದ ಕೊಡಲಾಗುವ ಶೌರ್ಯ ಪ್ರಶಸ್ತಿ ಸೇವಾ ಪದಕ ಪುಸ್ಕøತರಾಗಿರುವ ಅಗ್ನಿಶಾಮಕ ಅಶೋಕ ವಡೇರ ಭಾಜನರಾಗಿ ಹುಟ್ಟೂರು ಬೆಟಗೇರಿ ಹಾಗೂ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಇಲಾಖೆಯ ಕೀರ್ತಿ ಹೆಚ್ಚಿಸಿದ್ದಾರೆ. ರಾಷ್ಟ್ರಪತಿ ಅವರಿಂದ ಶೌರ್ಯ ಪ್ರಶಸ್ತಿ ಪಡೆಯುತ್ತಿರುವ ಬೆಟಗೇರಿ ಗ್ರಾಮದ ಅಶೋಕ ವಡೇರ ಅಗ್ನಿ ಶಾಮಕ ಇಲಾಖೆಯಲ್ಲಿ ದಾಖಲೆಯ ಇತಿಹಾಸ ಬರೆದಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಡ ರೈತ ಕುಟುಂಬದ ಕೆಂಚಪ್ಪ ಮತ್ತು ಯಲ್ಲವ್ವ ದಂಪತಿಗಳ ಕೊನೆಯ ಸುಪುತ್ರನಾಗಿ 1988 ಜನೇವರಿ 13 ರಂದು ಜನಸಿದ ಅಶೋಕ ವಡೇರ ಅವರು ಹುಟ್ಟೂರಲ್ಲಿ 5 ನೇ ತರಗತಿ ತನಕ ಪ್ರಾಥಮಿಕ ಶಿಕ್ಷಣ, ಗೋಕಾಕ ಎನ್‍ಎಸ್‍ಎಫ್ ಶಾಲೆಯಲ್ಲಿ 6-10ನೇ ತರಗತಿ ತನಕ ಶಿಕ್ಷಣ ವ್ಯಾಸಂಗ ಮಾಡಿ, ಗೋಕಾಕ ಎಲ್‍ಇಟಿ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗ ಶಿಕ್ಷಣ ಅಭ್ಯಾಸ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಇಲಾಖೆ ಅಗ್ನಿಶಾಮಕನಾಗಿ 2008 ರಲ್ಲಿ ಸೇವೆಗೆ ಸೇರಿದ ಅಶೋಕ ವಡೇರ ಅವರು, ಮುಂಡರಗಿ ಅಗ್ನಿ ಶಾಮಕ ಠಾಣೆಯಲ್ಲಿ 9 ವರ್ಷ ಸೇವೆಗೈದ ಬಳಿಕ 2017 ರಿಂದ ಈಗ ಸವದತ್ತಿ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕನಾಗಿ ಕರ್ತವ್ಯ ನಿರತರಾಗಿದ್ದಾರೆ. ತನ್ನ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆಯ ಸಾಹಸದ ಸಾಧನೆಗೈದ ಅಶೋಕ ವಡೇರ ಕಾರ್ಯವನ್ನು ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸಾರ್ವಜನಿಕರು ಪ್ರಶಂಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.