ಬೆಟಗೇರಿ: ಡಾ.ಬೆಟಗೇರಿ ಕೃಷ್ಣಶರ್ಮರು ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಹೇಳಿದರು.
ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ಅ.30 ರಂದು ನಡೆದ ಡಾ.ಬೆಟಗೇರಿ ಕೃಷ್ಣಶರ್ಮರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನಂದಕಂದರು ಅಪ್ಪಟ್ಟ ದೇಶಿ ಕವಿಯಾಗಿದ್ದರು. ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ದಿವ್ಯ ಚೇತನರಾಗಿದ್ದಾರೆ. ನಾಡಿನ ಜನ ಒಂದಿಷ್ಟು ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೆ ಮಾಡಬೇಕಿದೆ ಎಂದರು.
ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಅವರು ಆನಂದಕಂದರ ಬದುಕು, ಬರಹದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಶರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ವೇಳೆ ಎಸ್.ಬಿ.ಸನದಿ, ಆರ್.ಬಿ.ನಾಯ್ಕ, ಎಸ್.ಎಮ್.ಬಿರಾದಾರ, ಗೀತಾ ಕಮತ, ಎಮ್.ಎಸ್.ಪಾಟೀಲ, ಎಮ್.ಬಿ.ಸೋಮನಟ್ಟಿ, ವಿ.ಕೆ.ಪತ್ತಾರ, ಉಭಯ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳು, ಗ್ರಾಮಸ್ಥರು ಇದ್ದರು.
