ಭಕ್ತಿಯಿಂದ ಮಾಡುವ ಧ್ಯಾನವು ಸಮಾಜಕ್ಕೆ ಅಮೃತದ ಬೆಳಕು
ಮೂಡಲಗಿ: ‘ಜನರು ಭಕ್ತಿಯಿಂದ ಮಾಡುವ ದೇವರ ಧ್ಯಾನದಿಂದ ಸಮಾಜಕ್ಕೆ ಅಮೃತದ ಬೆಳಕು ದೊರೆಯುತ್ತದೆ’ ಎಂದು ಗುಲಗಾಜಂಬಗಿಯ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಕೆಇಬಿ ಪ್ಲಾಟ್ ಬಳಿಯ ಮಾರ್ತಂಡ ಮಲ್ಲಯ್ಯ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನದ ಅಡಿಗಲ್ಲು ನೆರವೇರಿಸಿ ನಂತರ ಜರುಗಿದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ದೇವರು ಮತ್ತು ಭಕ್ತರು, ಗುರು, ಶಿಷ್ಯ ಹಾಗೂ ತಂದೆ, ಮಗ ಇಲ್ಲಿ ಭಾವನಾತ್ಮಕ ಸಂಬಂಧಗಳಲ್ಲಿ ಪಾವಿತ್ರ್ಯತೆ ಇದ್ದರೆ ಅಲ್ಲಿ ಶ್ರೇಷ್ಠತೆ ಪ್ರಜ್ವಲಿಸುತ್ತದೆ ಎಂದರು.
ಮೂಡಲಗಿಯ ಕೆಇಬಿ ಪ್ಲಾಟ್‍ದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನಗಳ ನಿರ್ಮಾಣದ ಮೂಲಕ ಇದೊಂದು ಜಾಗೃತ ಸ್ಥಳವಾಗುತ್ತದೆ. ಇಲ್ಲಿ ನಿತ್ಯ ಸಂತ್ಸಂಗ, ಪ್ರವಚನ, ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುವ ಕಾರ್ಯಗಳು ನಡೆಯಲಿ ಎಂದರು.
ಸುಣಧೋಳಿಯ ಶಿವಾನಂದ ಸ್ವಾಮೀಜಿ ಮಾತನಾಡಿ ಮನುಷ್ಯ ತನ್ನೊಳಗಿನ ಮದ, ಮತ್ಸರ ಮತ್ತು ದೋಷ ಗುಣಗಳನ್ನು ತ್ಯಜಿಸಿ ಉತ್ತಮ ಮಾರ್ಗದತ್ತ ಸಾಗಿದಾಗ ಬದುಕಿನಲ್ಲಿ ಸಾರ್ಥಕತೆ ಪ್ರಾಪ್ತವಾಗುತ್ತದೆ ಎಂದರು.
ದುಂಡಪ್ಪ ಮಹಾರಾಜರು ಅವಗುಣಗಳನ್ನು ತ್ಯಜಿಸಿ ಕಠಿಣ ವೃತ, ಸಾಧನೆಯ ಮೂಲಕ ಶರಣತ್ವದತ್ತ ಸಾಗಿದ್ದಾರೆ. ದುಂಡಪ್ಪ ಮಹಾರಾಜರ ಪರಿವರ್ತನೆಯು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಡೋಣವಾಡದ ಶಿವಾನಂದ ಸ್ವಾಮೀಜಿ ಮಾತನಾಡಿ ಮನುಷ್ಯನು ಬೇರೆಯವರಿಗೆ ಕೆಡಕು ಮಾಡವುದನ್ನು ಎಂದಿಗೂ ಮಾಡಬಾರದು. ದುಂಡಪ್ಪ ಮಹಾರಾಜರ ಸಂಕಲ್ಪಕ್ಕೆ ಬಿದರಿ ಕಲ್ಮಠ ಮತ್ತು ಸುಣಧೋಳಿಯ ಶಿವಾನಂದ ಸ್ವಾಮೀಜಿಗಳು ಸೇರಿದಂತೆ ಹಲವಾರು ಪೂಜ್ಯರ ಆಶೀರ್ವಾದ ದೊರೆತಿದೆ. ದೇವಸ್ಥಾನ ನಿರ್ಮಾಣವಾಗಿ ಭಕ್ತರ ಶ್ರದ್ಧಾ ಸ್ಥಾನವಾಗಲಿ ಎಂದು ಹೇಳಿದರು.
ಇಟನಾಳದ ಸಿದ್ಧೇಶ್ವರ ಸ್ವಾಮಿಜಿ, ತಿಗಡಿಯ ಶಂಕರಾನಂದ ಸ್ವಾಮೀಜಿ, ಚಿಕ್ಕಹಂಚಿನಾಳದ ಶಾಂತಾನಂದ ಸ್ವಾಮೀಜಿ ಮಾತನಾಡಿದರು.
ಮಲ್ಲಯ್ಯ ಹಾಗೂ ಅಯ್ಯಪ್ಪಸ್ವಾಮಿ ಆಶ್ರಮದ ದುಂಡಪ್ಪ ಮಹಾರಾಜರು, ತುಕ್ಕಾನಟ್ಟಿಯ ಅಮೋಘತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಬಸವರಾಜ ಕಬ್ಬೂರ ಪ್ರಸ್ತಾವಿಕ ಮಾತನಾಡಿದರು. ಈಶ್ವರ ಗೊಲಶೆಟ್ಟಿ ಸ್ವಾಗತಿಸಿದರು, ಮಹಾದೇವ ಕುಲಗೋಡ, ಕೃಷ್ಣಾ ಗಾಡಿವಡ್ಡರ ನಿರೂಪಿಸಿದರು, ಸುರೇಶ ಮೆಳವಂಕಿ ವಂದಿಸಿದರು.
ಅನ್ನಪ್ರಸಾದಲ್ಲಿ ಜಾತಿ, ಮತ, ಪಂಥ ಎನ್ನದೆ ನೂರಾರು ಜನರು ಭಾಗವಹಿಸಿದ್ದರು.