ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಲೇಬೇಕು : ಮಾಜಿ ಸಚಿವ ರಮೇಶ ಜಾರಕಿಹೊಳಿ
ಅಥಣಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಬೇಕು. ಈ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುವಂತೆ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ಅಥಣಿ ಪಟ್ಟಣದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಮಾತನಾಡಿದ ಅವರು, ದುರಹಂಕಾರ ಮತ್ತು ಗುಂಡಾಗಿರಿ ದರ್ಫದಿಂದ ಮೆರೆಯುತ್ತಿರುವ ಡಿ.ಕೆ. ಶಿವಕುಮಾರ ಅವರಿಗೆ ಪಾಠ ಕಲಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಅಥಣಿ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರೂ ನಾನೇ ಮುಖ್ಯಮಂತ್ರಿಯಾದಂತೆ. ಅಷ್ಟೊಂದು ಅವಿನಾಭಾವ ಸಂಬಂಧ ನಾವು ಹೊಂದಿದ್ದೇವೆ. ಈ ಭಾಗದ ರೈತರ ಪ್ರಮುಖ ಬೇಡಿಕೆಯಾಗಿರುವ ಬಸವೇಶ್ವರ ಯಾತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಶೀಘ್ರದೊಳಗೆ ಬಸವೇಶ್ವರ ಯಾತ ನೀರಾವರಿ ಯೋಜನಾನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು.
ಅಥಣಿ ಭಾಗದ ಶಕ್ತಿಯಿಂದ ರಾಜ್ಯದಲ್ಲಿ ನಾನಿಂದು ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದೇನೆ. ಅಷ್ಟೊಂದು ಪ್ರೀತಿ, ವಿಶ್ವಾಸ ಹಾಗೂ ಶಕ್ತಿಯನ್ನು ಈ ಭಾಗದ ಜನರು ನೀಡಿದ್ದಾರೆ. ಬರುವ 10 ರಂದು ನಡೆಯುವ ವಿಪ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು. ಇನ್ನು ಎರಡನೇ ಪ್ರಾಶಸ್ತ್ಯದ ಮತವನ್ನು ಯಾರಿಗೆ ನೀಡಬೇಕೆಂಬುದು ಇನ್ನೂ ವರಿಷ್ಠರಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಇದರ ಸಂಬಂಧ ವರಿಷ್ಠರೊಂದಿಗೆ ಶೀಘ್ರ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮಗಳ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು.
ನಾನು ಸೇರಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಠಳ್ಳಿ ಎಲ್ಲರೂ ಬಿಜೆಪಿಯವರೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತವಾಗಿದೆ. ನಾವು ಹೇಳಿದವರಿಗೆ ಮತವನ್ನು ನೀಡಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ಕಾಂಗ್ರೇಸ್‍ನ್ನು ಸೋಲಿಸೋಣ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾಗಿದ್ದ ವಿವೇಕರಾವ್ ಪಾಟೀಲ ಅವರು ಕಾಂಗ್ರೇಸ್ ಪಕ್ಷದಲ್ಲಿ ದುಡಿದರೂ ಸಹ ಅವರಿಗೆ ವಿಪ ಟಿಕೇಟ್ ನೀಡಲಿಲ್ಲ. ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದರೂ ಕಾಂಗ್ರೇಸ್ ಪಕ್ಷ ಅವರಿಗೆ ಟಿಕೇಟ್ ನಿರಾಕರಿಸುವ ಮೂಲಕ ಅವಮಾನಿಸಿದೆ. ಹೀಗಾಗಿ ಬೇಸತ್ತು ವಿವೇಕರಾವ್ ಅವರು ನಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಅಭ್ಯರ್ಥಿ ಪರ ಮತ ಯಾಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಲಖನ್ ಜಾರಕಿಹೊಳಿ ಅವರು ಪಕ್ಷೇತರರಾಗಿ ಈ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ನಾವಂತೂ ಲಖನ್ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡುವುದರ ಬಗ್ಗೆ ಯೋಚಿಸಿರಲೇ ಇಲ್ಲ. ಕೆಲ ಬದಲಾದ ಸನ್ನಿವೇಶದಲ್ಲಿ ಕಾಂಗ್ರೇಸ್‍ನ್ನು ಸೋಲಿಸಲೇಬೇಕಾದ ಅನಿವಾರ್ಯತೆಯಿಂದ ಲಖನ್ ಅವರು ಕಣಕ್ಕಿಳಿದಿದ್ದಾರೆಂದು ರಮೇಶ ಜಾರಕಿಹೊಳಿ ಹೇಳಿದರು.
ಬಿಜೆಪಿ ಮುಖಂಡರುಗಳು, ಪದಾಧಿಕಾರಿಗಳು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.