ಭೈರನಟ್ಟಿಯಲ್ಲಿ ಕೆಎಲ್ಇ ಡಿಪ್ಲೋಮಾ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ವಿಶೇಷ ಶಿಬಿರ
ಮೂಡಲಗಿ: ಸಮೀಪದ ಭೈರನಟ್ಟಿ ಗ್ರಾಮದಲ್ಲಿ ಮಹಾಲಿಂಗಪುರದ ಕೆ.ಎಲ್.ಇ ಡಿಪ್ಲೋಮಾ ಕಾಲೇಜ್ ವತಿಯಿಂದ ಒಂದು ವಾರದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಏರ್ಪಡಿಸಲಾಯಿತು.
ಮೊದಲ ದಿನ ಪಿ.ಕೆ.ಪಿ.ಎಸ್ ಅದ್ಯಕ್ಷ ಅಜ್ಜಪ್ಪ ಗಿರಡ್ಡಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ವಿಕಾಸಗೊಳಿಸುವುದೇ ಎನ್.ಎಸ್.ಎಸ್ ಶಿಬಿರದ ಮೂಲ ಉದ್ದೇಶವಾಗಿದೆ ಎಂದರು.
ಬೈರನಟ್ಟಿ ಗ್ರಾಮದ ಹಿರಿಯರಾದ ಗಿರೆಪ್ಪಾ ಈರಡ್ಡಿ ಮಾತನಾಡಿ, ಯುವಕರಿಂದಲೇ ದೇಶದ ಅಭಿವೃದ್ಧಿಯ ಹರಿಕಾರರಾದ ಯುವಕರಿಗೆ ಅಗತ್ಯವಾದ ಉತ್ತಮ ಸಂಸ್ಕಾರ ಹಾಗೂ ಒಳ್ಳೆಯ ಮಾರ್ಗದರ್ಶನ ಇಂಥ ಶಿಬಿರದಿಂದ ದೊರೆಯಲು ಸಾಧ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್. ಐ. ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಿಕ ವಿದ್ಯಾರ್ಥಿಗಳ ಶ್ರಮದಾನದ ಈ ಶಿಬಿರಕ್ಕೆ ಭೈರನಟ್ಟಿ ಗ್ರಾಮಸ್ಥರು ನೀಡಿದ ಸಹಕಾರ ಮತ್ತು ಸ್ಪಂದನೆ ಸ್ಮರಣೀಯ ಎಂದರು. ಎನ್.ಎಸ್.ಎಸ್ ಅಧಿಕಾರಿ ಮಹಾದೇವಿ ಅಂಬಿ ವೇದಿಕೆಯ ಮೇಲೆ ಇದ್ದರು.
ಪ್ರತಿದಿನ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳು ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಅಭಿಯಾನ, ನೃತ್ಯ, ಹಾಡು, ಬೀದಿ ನಾಟಕಗಳ ಮೂಲಕ ಮೂಡನಂಬಿಕೆಗಳ ಬಗ್ಗೆ ಅರಿವು, ಯೋಗ ಮತ್ತು ಧ್ಯಾನದ ಮೂಲಕ ಆರೋಗ್ಯ ಜಾಗೃತಿ ಮೂಡಿಸಿದರು. ಮನೋರಂಜನಾ ಕಾರ್ಯಕ್ರಮಗಳ ಮೂಲಕ ಒಂದು ವಾರದವರೆಗೆ ರಂಜಿಸಿದರು.
ಮುಖ್ಯವಾಗಿ ಮಹಿಳಾ ಮನೋಬಲ ಮತ್ತು ಸಮಾಜದ ಸ್ವಾಸ್ಥö್ಯ, ಕಾನೂನು ಅರಿವು ಮತ್ತು ನೆರವು, ಯೋಗದಿಂದ ಆರೋಗ್ಯವೃದ್ದಿ, ಸ್ವಚ್ಛಭಾರತ ಅಭಿಯಾನದಲ್ಲಿ ಯುವಕರ ಪಾತ್ರ, ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕತೆ ಮತ್ತು ಕೈಗಾರಿಕೆಗಳ ಪಾತ್ರ ವಿಷಯವಾಗಿ ವಿಶೇಷ ಉಪನ್ಯಾಸ ಜರಿಗಿದವು. ವಿದ್ಯಾರ್ಥಿ ಹಾಗೂ ಸಿಬ್ಬಂದಿ ಸೇರಿ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅದರ ಮಹತ್ವ ತಿಳಿದರು. ಕೊನೆಯ ದಿನ ಶ್ರೀ ಜಡಿಸಿದ್ದೇಶ್ವರ ಗುಡಿಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಸಮಾಪ್ತಗೊಳಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಉದಯಕುಮಾರ ಬೆಳ್ಳುಂಡಗಿ, ಡಿ. ಬಿ. ಕೋಳಿ, ಎಸ್. ಎಚ್. ಮೆಳವಂಕಿ, ಪ್ರಕಾಶ ಬಿ.ಪಾಟೀಲ, ಎಸ್. ಐ. ಕುಂದಗೋಳ, ಹನುಮಂತ ಜೋಗನ್ನವರ, ಕಾಲೇಜು ಎನ್.ಎಸ್.ಎಸ್ ವಿಭಾಗದ ಸಿಬ್ಬಂದಿಗಳಾದ ಸವಿತಾ ಬೀಳಗಿ, ವಿಶಾಲ ಮೆಟಗುಡ್ಡ, ಅನಿಕೇತ ತಾರದಾಳೆ, ಅಮಿತ ಜಾಧವ, ಗೀತಾ ಉಪಾಸೆ, ಈಶ್ವರ ಹೂಲಿ, ವಾಣೆ ಮುಂಗರವಾಡಿ, ಲಕ್ಷ್ಮೀ ನಾಯಕ, ನಿರ್ಮಲಾ ಫಕೀರಪುರ, ಸುಧೀರ ಲಾವಟೆ, ಪ್ರಕಾಶ ಬಡಿಗೇರ ಪ್ರವೀಣ ಅವರಾದಿ, ವಿನೋದ ಕುಂದರಗಿ ಬಸವರಾಜ ಅಂಗಡಿ ಹಾಗೂ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.