ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ
ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಮುಂಜಾನೆ ಅಕಾಲಿಕ ಮಳೆಯಾಗಿದ್ದು ರೈತರ ಹುಲ್ಲಿನ ಬಣವೆ, ಅಡಿಕೆ, ಶುಂಠಿ ಮಳೆ ನೀರಿಗೆ ಸಿಲುಕಿ ಅಪಾರ ಹಾನಿ ಸಂಭವಿಸಿದೆ. ಬನವಾಸಿ ಹಾಗೂ ಸುತ್ತಲಿನ ಭಾಶಿ, ಮೊಗವಳ್ಳಿ, ಅಜ್ಜರಣಿ, ಗುಡ್ನಾಪೂರ, ಕಂತ್ರಾಜಿ, ಮುತಾಳಕೊಪ್ಪ, ದಾಸನಕೊಪ್ಪ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಮುಂಜಾನೆ ಎರಡು ಗಂಟೆಗಳ ಕಾಲ ಮಳೆಯಾಗಿರುವುದು ಕಂಡುಬಂದಿದೆ. ಅಕಾಲಿಕ ಮಳೆಯಿಂದಾಗಿ ರೈತರ ಹುಲ್ಲಿನ ಬಣವೆ, ಕಣದಲ್ಲಿ ಹಾಕಿದ ಶುಂಠಿ, ಅಡಿಕೆ ಅಲ್ಲದೇ ಮನೆಯ ಮಹಡಿಯಲ್ಲಿ ಒಣಗಿಸಲು ಹಾಕಿದ್ದ ಅಡಿಕೆ ಮಳೆಗೆ ಸಿಲುಕಿ ಅಪಾರ ಹಾನಿ ಉಂಟಾಗಿದೆ.
ಏಕಾಏಕಿ ಸುರಿದ ಅಕಾಲಿಕ ಮಳೆಯಿಂದಾಗಿ ಬೇಸಿಗೆಯ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದ್ದು ಮಾವಿನ ಹೂವು ಉದುರಿ ಬೆಳೆ ನಾಶವಾಗಲಿದೆ. ಅಸಹಜ ವಾತಾವರಣ ಹಾಗೂ ಅಕಾಲಿಕ ಮಳೆಯಿಂದ ಬೆಳೆಗಳು ಹಾಳಾಗುತ್ತಿರುವುದು ರೈತ ವಲಯದಲ್ಲಿ ಆತಂಕ ಮೂಡಿಸಿದೆ.