ಬೆಟಗೇರಿ: ಗ್ರಾಮದಲ್ಲಿ ಕಳೆದ ಶತ, ಶತಮಾನಗಳಿಂದಲೂ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ಪ್ರಯುಕ್ತ ಜೂನ.14ರಂದು ಜೋಡೆತ್ತುಗಳನ್ನು ವಿವಿಧ ಬಗೆಯ ಬಣ್ಣ ಹಚ್ಚಿ ಕೊಡುಗಳಿಗೆ ರಿಬ್ಬನ್, ಹಣೆಪಟ್ಟಿ, ಗೆಜ್ಜೆ ಕಟ್ಟಿ ಶೃಂಗರಿಸಿ ಜೋಡೆತ್ತುಗಳನ್ನು ಓಡಿಸಿದ ಬಳಿಕ ಗ್ರಾಮದ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಸಂಭ್ರಮದಿಂದ ಸ್ಥಳೀಯರು ಕಾರಹುಣ್ಣಿಮೆಯನ್ನು ಆಚರಿಸಿದರು.
ಗ್ರಾಮದ ಎಲ್ಲ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಪುರದೇವರ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪನೆ ಪುರಜನರಿಂದ ನಡೆಯಿತು.
ಸ್ಥಳೀಯ ಹಿರಿಯ ರೈತರ ಮಾರ್ಗದರ್ಶನ ಹಾಗೂ ಸಂಪ್ರದಾಯದಂತೆ ಇಲ್ಲಿಯ ದೇಯನ್ನವರ ಮನೆತನದ ಮುಂಗಾರು ಹಾಗೂ ಸೋಮನಗೌಡರ ಮನೆತನದ ಹಿಂಗಾರು ಹಂಗಾಮಿನ ನಾಮಾಂಕಿತ ಎರಡು ಎತ್ತುಗಳನ್ನು ಶೃಂಗರಿಸಿ ಪೂಜಿಸಿ, ಊರಿನ ಅಗಸಿಯ ಹೆಬ್ಬಾಗಿಲಲ್ಲಿ ಓಡಿಸಲಾಯಿತು. ಈ ಸಲ ದೇಯನ್ನವರ ಮನೆತನದ ಮುಂಗಾರು ಎತ್ತು ಮುಂದಾಗಿ ಓಡಿತು. ಎತ್ತುಗಳನ್ನು ಕರಿ ಹರಿದ ಬಳಿಕ ಯುವಕರು ಒಬ್ಬರಿಗಿಂತ ಮತ್ತೂಬ್ಬರು ಮೇಲಕ್ಕೆ ಹಾರಿ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿದ ಕರಿಯನ್ನು ಹರಿಯಲು ಹರಸಾಹಸ ಮಾಡುತ್ತಿದ್ದರೆ ನೋಡುಗರಿಗೆ ಮನರಂಜನೆ ನೀಡುವಂತಿತ್ತು.
ಸ್ಥಳೀಯ ರೈತರು ಒಬ್ಬರಿಗೊಬ್ಬರು ಈ ಸಲ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ಬೆಳೆಯುವ ಕುರಿತು ಮಾತನಾಡುತ್ತಾ ತಮ್ಮ ಮನೆಗಳತ್ತ ಹಜ್ಜೆ ಹಾಕಿದರು. ಸ್ಥಳೀಯ ಯುವಕರು, ರೈತರು, ಮಹಿಳೆಯರು, ವಯೋವೃದ್ಧರು, ಗ್ರಾಮಸ್ಥರು ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ಕಾರ್ಯಕ್ರಮದಲ್ಲಿ ಇದ್ದರು.
