ಬೆಳಗಾವಿ* – ನಮ್ಮ ಬೆಂಬಲಿತ 13 ಅಭ್ಯರ್ಥಿಗಳನ್ನು ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕಣಕ್ಕಿಳಿಸಿದ್ದು, ದೇವರು ಮತ್ತು ಮತದಾರರ ಆಶೀರ್ವಾದದಿಂದ ಅವರನ್ನು ಗೆಲ್ಲಿಸಿಕೊಂಡು ಬಂದು ಮುಂದಿನ ಐದು ವರ್ಷಗಳ ಕಾಲ ಬ್ಯಾಂಕಿನ ಆಡಳಿತ ನಡೆಸಲು ಸಿದ್ಧರಾಗಿದ್ದೇವೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಶನಿವಾರದಂದು ಇಲ್ಲಿಯ ಬ್ಯಾಂಕಿನ ಸಭಾಗೃಹದಲ್ಲಿ ತಮ್ಮ ಬೆಂಬಲಿತ 6 ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮೂಡಲಗಿ, ಗೋಕಾಕ, ರಾಮದುರ್ಗ, ಹುಕ್ಕೇರಿ, ಬೆಳಗಾವಿ ಮತ್ತು ಇತರೆ ವಿಭಾಗದಿಂದ ಒಟ್ಟು 6 ಜನರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ಮೂಡಲಗಿ ತಾಲ್ಲೂಕಿನ ಪಿಕೆಪಿಎಸ್ ಗಳಿಂದ ನೀಲಕಂಠ ಕಪ್ಪಲಗುದ್ದಿ, ಗೋಕಾಕ ತಾಲೂಕಿನ ಪಿಕೆಪಿಎಸ್ ಗಳಿಂದ ಅಮರನಾಥ ಜಾರಕಿಹೊಳಿ, ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಗಳಿಂದ ಶ್ರೀಕಾಂತ ಢವಣ, ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಗಳಿಂದ ರಾಜೇಂದ್ರ ಪಾಟೀಲ, ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಗಳಿಂದ ರಾಹುಲ್ ಜಾರಕಿಹೊಳಿ ಮತ್ತು ಇತರೆ ಕ್ಷೇತ್ರದಿಂದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರನ್ನು ನಮ್ಮ ಪೆನೆಲ್ ದಿಂದ ಕಣಕ್ಕಿಳಿಸಲಾಗಿದೆ ಎಂದವರು ಮಾಹಿತಿಯನ್ನು ನೀಡಿದರು.
ನಾಳೆಯ ರವಿವಾರದಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೋಮವಾರದಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ಎಲ್ಲೆಲ್ಲಿ ನಮಗೆ ಅನುಕೂಲ ಇದೆಯೋ? ಅಲ್ಲಲ್ಲಿ ಅಭ್ಯರ್ಥಿಗಳನ್ನು ಮನವೊಲಿಸಿ ಅವಿರೋಧ ಆಯ್ಕೆಗೆ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಅವಿರೋಧ ಆಯ್ಕೆಗೆ ಸಹಕಾರ ಸಿಗದಿದ್ದಲ್ಲಿ ಚುನಾವಣೆಯನ್ನು ಎದುರಿಸಲಾಗುವುದು. ನಮ್ಮ ಪೆನೆಲ್ ದಿಂದ ಈಗಾಗಲೇ 13 ಜನರು ಸ್ಪರ್ಧೆ ಮಾಡಿದ್ದು, ಅವರನ್ನು ಆರಿಸಿ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಎಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಅವಕಾಶವಿರುತ್ತದೆಯೋ ಅಲ್ಲಿ ನಮ್ಮ ವಿರೋಧಿಗಳು ಯಾರನ್ನಾದರೂ ಹುಡುಕಿಕೊಂಡು ಬಂದು ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದ್ದಾರೆ. ಅವರಿಗೆ ಅವಿರೋಧ ಆಯ್ಕೆ ಬೇಕಾಗಿಲ್ಲ. ಜತೆಗೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿ ಆಮಿಷ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧಿಗಳ ಹೆಸರನ್ನು ಹೇಳದೇ ಟೀಕಿಸಿದರು.
ಈ ಮೊದಲೇ ಹೇಳಿದಂತೆ ಅಥಣಿ, ಕಾಗವಾಡ, ಚಿಕ್ಕೋಡಿ ತಾಲ್ಲೂಕಿನ ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ಹಾಕುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ನಿಪ್ಪಾಣಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಉತ್ತಮ ಪಾಟೀಲ ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ. ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆಗೆ ಸಹಕಾರವನ್ನು ನೀಡುವಂತೆ ಅವರಲ್ಲಿ ಸಾಕಷ್ಟು ಸಲ ವಿನಂತಿಸಿಕೊಳ್ಳಲಾಗಿತ್ತು. ಅಲ್ಲದೇ ಸಚಿವ ಸತೀಶ್ ಜಾರಕಿಹೊಳಿಯವರು ವೀರಕುಮಾರ್ ಪಾಟೀಲ ಮೂಲಕ ಸ್ಪರ್ಧೆಯನ್ನು ತಡೆಯಲಿಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೂ ಯಾರ ಮಾತನ್ನು ಕೇಳದೇ ಉತ್ತಮ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಾವು ಜೊಲ್ಲೆಯವರ ಬೆಂಬಲಕ್ಕೆ ನಿಂತು ಗೆಲ್ಲಿಸಿ ತೋರಿಸುತ್ತೇವೆ ಎಂದು ಅವರು ತಿಳಿಸಿದರು.
ಇನ್ನು ಕಿತ್ತೂರು ಕ್ಷೇತ್ರದಿಂದ ವಿಕ್ರಮ ಇನಾಂದಾರ ನಮ್ಮ ಅಭ್ಯರ್ಥಿಯಾಗಿದ್ದಾರೆ. ಅಲ್ಲಿ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಬಾಸಾಹೇಬ್ ಪಾಟೀಲ ಮಧ್ಯ ಚರ್ಚೆಗಳು ಏನು ನಡೆದಿವೆ ಎಂಬುದರ ಬಗ್ಗೆ ನಮಗೆ ಖಚಿತವಾದ ಮಾಹಿತಿಗಳಿಲ್ಲ. ಬಾಬಾಸಾಹೇಬ್ ಪಾಟೀಲ ಅವರು ತಮ್ಮ ಸಹೋದರನನ್ನು ಇನಾಂದಾರ ಅವರ ಎದುರಾಳಿಯಾಗಿ ನಿಲ್ಲಿಸಿದ್ದಾರೆ. ಕಾಗವಾಡದಿಂದ ಶ್ರೀನಿವಾಸ ಪಾಟೀಲ ಮತ್ತು ಅಥಣಿಯಿಂದ ಮಹೇಶ್ ಕುಮಠಳ್ಳಿ ಅಭ್ಯರ್ಥಿಗಳಾಗಿದ್ದರ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ. ನಮ್ಮನ್ನು ಕೇಳದೇ ಅವರುಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತರೇ ಕ್ಷೇತ್ರದಿಂದ ಸುಮಾರು 6 ಜನರು ಸ್ಪರ್ಧೆಯಲ್ಲಿದ್ದರು. ಅವರಲ್ಲಿ ಮಹಾಂತೇಶ ಕವಟಗಿಮಠ, ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡರ, ಗುರು ಮೆಟಗುಡ್ಡ ಮುಂತಾದವರ ಹೆಸರುಗಳು ಚಾಲನೆಯಲ್ಲಿದ್ದವು. ಆದರೆ, ಕೊನೆಗೆ ಚನ್ನರಾಜ ಅವರ ಹೆಸರನ್ನು ಅಂತಿಮ ಮಾಡಲಾಯಿತು. ಇದಕ್ಕೂ ಮೊದಲು ಚನ್ನರಾಜ ಅವರು ಬೆಳಗಾವಿ-ಖಾನಾಪೂರ- ಕಿತ್ತೂರು ಕ್ಷೇತ್ರದ ಪಿಕೆಪಿಎಸ್ ದಿಂದ ಸ್ಪರ್ಧೆ ಮಾಡುವ ಪ್ರಯತ್ನದಲ್ಲಿದ್ದರು. ಸತೀಶ್ ಜಾರಕಿಹೊಳಿಯವರ ಕೋರಿಕೆ ಮೇರೆಗೆ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಆದರೆ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಚರ್ಚೆ ನಡೆಸಿ ಕೊನೆಗೆ ಚನ್ನರಾಜ ಹಟ್ಟಿಹೊಳಿ ಅವರನ್ನು ಇತರೇ ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರವನ್ನು ತೆಗೆದುಕೊಂಡೆವು. ಅನುಭವಿಗಳು ಸಹಕಾರ ಕ್ಷೇತ್ರವನ್ನು ಪ್ರವೇಶ ಮಾಡಬೇಕು. ಒಳ್ಳೆಯವರು ಬರುವುದರಿಂದ ಬ್ಯಾಂಕ್ ಚೆನ್ನಾಗಿ ನಡೆಯುತ್ತದೆ. ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಹೊಸಬರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾರಕಿಹೊಳಿಯವರ ಕುಟುಂಬದಿಂದ ಈ ಬಾರಿ ಇಬ್ಬರು ಸ್ಪರ್ಧೆ ಮಾಡುತ್ತಿದ್ದು, ಇದು ಕುಟುಂಬ ರಾಜಕೀಯ ಅಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಜಿಲ್ಲೆ, ರಾಜ್ಯ ಹಾಗೂ ದೇಶದ ಇತಿಹಾಸವನ್ನು ನೋಡಿದರೆ ಎಲ್ಲರೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತಂದಿದ್ದಾರೆ. ಇದರಲ್ಲಿ ಅಚ್ಚರಿಯೂ ಏನಿಲ್ಲ. ಬೆಳಗಾವಿಯಿಂದ ರಾಹುಲ್ ಅವರನ್ನು ನಿಲ್ಲಿಸಲು 6 ತಿಂಗಳಿನ ಹಿಂದೆಯೇ ಚರ್ಚೆ ನಡೆದಿತ್ತು. ಗೋಕಾಕದಲ್ಲಿ ಅಮರನಾಥ ಅವರನ್ನು ಆ ತಾಲ್ಲೂಕಿನ ಪಿಕೆಪಿಎಸ್ ಸಂಘಗಳು ಉತ್ಸುಕರಾಗಿದ್ದವು. ಅನಿವಾರ್ಯ ಸ್ಥಿತಿಯಲ್ಲಿ ಅಮರನಾಥ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಈ ಬ್ಯಾಂಕಿನ ಚುನಾವಣೆಯಲ್ಲಿ ನಾನು (ಬಾಲಚಂದ್ರ) ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ಈಗಲೂ ಅದೇ ನಿಲುವಿಗೆ ಬದ್ಧನಿರುವೆ. ಆದರೆ, ನಮ್ಮ ಕುಟುಂಬವರು ನಿಲ್ಲುವುದಿಲ್ಲವೆಂದು ಎಲ್ಲಿಯೂ ಹೇಳಿಲ್ಲವೆಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.
ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ಜನರನ್ನು ಕೈ ಬಿಡಬಾರದು. ನಮ್ಮ ಜನಸೇವೆಯನ್ನು ಮುಂದುವರೆಸಿಕೊಂಡು ಹೋಗಲು ನಮ್ಮ ಮಕ್ಕಳು ಜನಸೇವೆಗೆ ಬರುತ್ತಿದ್ದಾರೆ. ನಮ್ಮ ಎರಡನೇ ಪೀಳಿಗೆಯು ಬೆಳೆಯಬೇಕು. ಹೀಗಾಗಿ ನಮ್ಮ ರಥವು ಮುಂದಕ್ಕೆ ಸಾಗಬೇಕು. ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯತನಕ ನಮ್ಮ ಸೇವೆಯು ಜನರ ಮಧ್ಯ ಇರುತ್ತದೆ. ನಿರಂತರವಾಗಿ ಜನಸೇವೆಯನ್ನು ಮಾಡುತ್ತೇವೆ. ಇಂದು, ನಾಳೆ, ಎಂದೆಂದಿಗೂ ಜನರಿಗಾಗಿ ನಮ್ಮ ಸೇವೆ ಮುಡಿಪಾಗಿದೆ ಕುಟುಂಬ
ರಾಜಕೀಯವನ್ನು ಬಾಲಚಂದ್ರ ಜಾರಕಿಹೊಳಿಯವರು ಸಮರ್ಥಿಸಿಕೊಂಡರು.
ನಮ್ಮ ಮಕ್ಕಳು ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಬಂದರೂ ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಮುರಗೋಡ ಮಹಾಂತ್ ಅಜ್ಜನವರ ಆಶೀರ್ವಾದದಿಂದ ಬೆಳೆದಿರುವ ಈ ಬ್ಯಾಂಕಿನ ಪ್ರಗತಿಯಲ್ಲಿ ಲಿಂಗಾಯತ ಸಮಾಜದ ಪಾತ್ರ ಅಮೂಲ್ಯವಾಗಿದೆ ಎಂದವರು ಹೇಳಿದರು.
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದು ಸಾವಿರಾರು ಸಂಖ್ಯೆಯಲ್ಲಿ ಜಾರಕಿಹೊಳಿ ಸಹೋದರರ ಬೆಂಬಲಿಗರು ಬ್ಯಾಂಕಿನ ಆವರಣದಲ್ಲಿ ಜಮಾಯಿಸಿದ್ದರು. ಜಾರಕಿಹೊಳಿ ಸಹೋದರರ ಪೊಸ್ಟರ್ ಗಳು ರಾರಾಜಿಸಿದವು.
ಸರ್ಕ್ಯೂಟ್ ಹೌಸದಿಂದ ಬ್ಯಾಂಕಿನವರೆಗೆ ಅಭ್ಯರ್ಥಿಗಳು ಪಾದಯಾತ್ರೆ ಮೂಲಕ ಬಂದು ನಾಮಪತ್ರಗಳನ್ನು ಸಲ್ಲಿಸಿದರು.
ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಶಾಸಕ ವಿಶ್ವಾಸ ವೈದ್ಯ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗೋಡೆ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ,ವಿಕ್ರಮ ಇನಾಂದಾರ, ವಿರುಪಾಕ್ಷ ಮಾಮನಿ, ಶ್ರೀಕಾಂತ ಢವಣ, ರಾಜೇಂದ್ರ ಪಾಟೀಲ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಂತರ ಬ್ಯಾಂಕಿನ ಆವರಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಎಲ್ಲ 13 ಜನ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಗೆಲುವಿಗೆ ಬೇಕಾದ ಎಲ್ಲ ತಂತ್ರಗಳನ್ನು ಹೆಣೆಯಲಾಗಿದೆ. ಯಾವುದೇ ಅನುಮಾನವಿಲ್ಲದೇ ಬ್ಯಾಂಕಿನ ಅಧಿಕಾರವನ್ನು ನಾವೇ ಹಿಡಿಯಲಿದ್ದೇವೆ.
*-ಬಾಲಚಂದ್ರ ಜಾರಕಿಹೊಳಿ*
*ಶಾಸಕರು, ಬೆಮುಲ್ ಅಧ್ಯಕ್ಷರು*