ಬೆಳಗಾವಿ: ಇದೇ ಅಕ್ಟೋಬರ್ 19 ರಂದು ನಡೆಯುವ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನೆಲ್ ನಿಂದ ಒಟ್ಟು 6 ಜನರು ಆಯ್ಕೆಯಾಗಿದ್ದು, ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವ ಮಾತು ಸುಳ್ಳಾಗಿಸುವುದಿಲ್ಲ ಎಂದು ಬ್ಯಾಂಕಿನ ಪೆನೆಲ್ ಸಾರಥಿಯಾಗಿರುವ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬ್ಯಾಂಕಿನ ಚುನಾವಣೆಗೂ ಮುನ್ನವೇ ಎರಡು ತಿಂಗಳಿನಿಂದ ಹೇಳಿಕೊಂಡು ಬರುತ್ತಿದ್ದೆ. ಈ ಸಲ ನಮ್ಮದೇ ಆಡಳಿತ ಚುಕ್ಕಾಣಿ ಅಂತಾ. 16 ರಲ್ಲಿ ನಾವು 12 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತ ಬರುತ್ತಿದ್ದೆ. ಅದು ಸತ್ಯವಾಗುವ ದಿನ ಬರುತ್ತಿದೆ. ನಾಳಿಯೊಳಗೆ ನಮ್ಮ ಪೆನೆಲ್ ನ 6 ಜನರು ಅವಿರೋಧ ಆಯ್ಕೆಯಾಗಲಿದ್ದಾರೆ. ನಾಳೆ ಮಧ್ಯಾಹ್ನ ಇದು
ಅಧಿಕೃತವಾಗಲಿದೆ ಎಂದು ತಿಳಿಸಿದರು.
ಮೂಡಲಗಿ ತಾಲ್ಲೂಕಿನ ಕ್ಷೇತ್ರದಿಂದ ನೀಲಕಂಠ ಕಪ್ಪಲಗುದ್ದಿ, ಗೋಕಾಕ ತಾಲ್ಲೂಕು ಕ್ಷೇತ್ರದಿಂದ ಅಮರನಾಥ ಜಾರಕಿಹೊಳಿ, ಯರಗಟ್ಟಿ ತಾಲ್ಲೂಕು ಕ್ಷೇತ್ರದಿಂದ ಶಾಸಕ ವಿಶ್ವಾಸ ವೈದ್ಯ, ಸವದತ್ತಿ ತಾಲ್ಲೂಕು ಕ್ಷೇತ್ರದಿಂದ ವಿರುಪಾಕ್ಷ ಮಾಮನಿ, ಬೆಳಗಾವಿ ತಾಲ್ಲೂಕು ಕ್ಷೇತ್ರದಿಂದ ರಾಹುಲ್ ಜಾರಕಿಹೊಳಿ ಮತ್ತು ಖಾನಾಪೂರ ತಾಲ್ಲೂಕು ಕ್ಷೇತ್ರದಿಂದ ಅರವಿಂದ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ವಾಪಸ್ಸು ಪಡೆಯಲು ನಾಳೆ ಸೋಮವಾರದಂದು ಕಡೆಯ ದಿನಾಂಕವಾಗಿದ್ದರಿಂದ ನಾಳೆ ಅವಿರೋಧ ಆಯ್ಕೆಗೆ ಚುನಾವಣಾಧಿಕಾರಿಗಳು ಘೋಷಣೆ ಮಾಡುವರು ಎಂದು ತಿಳಿಸಿದರು.
ಒಟ್ಟು 16 ಸ್ಥಾನಗಳಿಗೆ ನಡೆಯುತ್ತಿರುವ ಜಿದ್ದಾ- ಜಿದ್ದಿನ ಚುನಾವಣೆಯಲ್ಲಿ ಈಗಾಗಲೇ ನಾವು 6 ಸ್ಥಾನಗಳನ್ನು ಗೆದ್ದು ಕೊಂಡಿದ್ದು, ಬಹುಮತ ಪಡೆಯಲು ಇನ್ನು ಕೇವಲ 3 ಸ್ಥಾನಗಳ ಕೊರತೆಯಿದೆ. ನಾಳೆಯೊಳಗೆ ಇತರೇ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಚನ್ನರಾಜ ಹಟ್ಟಿಹೊಳಿ ಅವರ ಅವಿರೋಧ ಆಯ್ಕೆ ಮಾಡುವ ಪ್ರಕ್ರಿಯೆಗಳು ಚಾಲನೆಯಲ್ಲಿದ್ದು, ಇವರು ಸಹ ಅವಿರೋಧವಾಗಿ ಆಯ್ಕೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇತರೇ ಕ್ಷೇತ್ರದಿಂದ ನಾಮಪತ್ರಗಳನ್ನು ಸಲ್ಲಿಸಿರುವವರೊಂದಿಗೆ ಈಗಾಗಲೇ ಮಾತುಕತೆಗಳನ್ನು ನಡೆಸಲಾಗುತ್ತಿದ್ದು, ಫಲಪ್ರದವಾಗುವ ಅವಕಾಶಗಳು ಹೆಚ್ಚಿವೆ ಎಂದು ಅವರು ಹೇಳಿದರು. ಚುನಾವಣೆಗೆ ನಾವು ಸಿದ್ಧರಾಗಿದ್ದು, ಅಲ್ಲಿಯೂ ಸಹ ಸುಮಾರು 6 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಇದರಿಂದ ನಮಗೆ 12 ಸ್ಥಾನಗಳ ಸಂಪೂರ್ಣ ಬಹುಮತವಾಗಲಿದ್ದು, ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯುವುದು ನಾವೇ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಸದುದ್ದೇಶದಿಂದ ಬ್ಯಾಂಕಿಗೆ ಹೊಸಬರನ್ನು ಕಟ್ಟಿಕೊಂಡು ಚುನಾವಣಾ ಅಖಾಡಕ್ಕೆ ಅಣಿಯಾಗಿದ್ದೇವೆ. ಪಕ್ಷಾತೀತವಾಗಿ ನಾವೆಲ್ಲರೂ ಒಂದು ಪೆನೆಲ್ ರಚಿಸಿಕೊಂಡು ಈ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತಿದ್ದೇವೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹಿಂದೆಂದಿಗಿಂತಲೂ ಉತ್ತಮ ಆಡಳಿತವನ್ನು ನಡೆಸುತ್ತೇವೆ. ಪಾರದರ್ಶಕ ಆಡಳಿತವನ್ನು ನೀಡುತ್ತೇವೆ.ರೈತರಿಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ನೌಕರರ ಹಿತವನ್ನು ಕಾಪಾಡುತ್ತೇವೆ. ರೈತರ ಹೆಮ್ಮೆಯ ಆಸ್ತಿಯಾಗಿರುವ ಬ್ಯಾಂಕನ್ನು ಕಾಪಾಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
