
ಬೆಳಗಾವಿ- ಶತಮಾನದ ಇತಿಹಾಸ ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಉನ್ನತಿಗಾಗಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಐದು ವರ್ಷದ ಅವಧಿಯೊಳಗೆ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡಿ, ಬ್ಯಾಂಕನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಸಂಕಲ್ಪ ಇಟ್ಟುಕೊಳ್ಳಲಾಗಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಇಲ್ಲಿಯ ಧರ್ಮನಾಥ ಭವನದಲ್ಲಿ ಗುರುವಾರದಂದು ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಸಂಘಗಳ ವತಿಯಿಂದ ನಡೆದ ಬಿಡಿಸಿಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರಾಹುಲ ಜಾರಕಿಹೊಳಿ ಮತ್ತು ಚನ್ನರಾಜ ಹಟ್ಟಿಹೊಳಿಯವರ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆಯವರು ಬ್ಯಾಂಕಿನ ಪ್ರಗತಿ ಕುರಿತು ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಈಡೇರಿಸುತ್ತಾರೆಂದು ತಿಳಿಸಿದರು.
ಬ್ಯಾಂಕಿನ ಹಿಂದಿನ ಅಧ್ಯಕ್ಷರು ಮತ್ತು ಪ್ರಸ್ತುತ ಅಧ್ಯಕ್ಷರಿಗೂ ಅಜ- ಗಜಾಂತರ ವ್ಯತ್ಯಾಸವಿದೆ. ಬ್ಯಾಂಕಿನ ಅಭಿವೃದ್ಧಿ ವಿಚಾರದಲ್ಲಿ ಜೊಲ್ಲೆಯವರು ಬ್ಯಾಂಕಿನ ನಿರ್ದೇಶಕರು, ಹಿರಿಯರು, ಪಿಕೆಪಿಎಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರೈತರ ಸಲಹೆಗಳನ್ನು ಪಡೆಯುತ್ತಾರೆ. ಆದರೆ, ಈ ಹಿಂದಿನ ಅಧ್ಯಕ್ಷರಿಗೆ ಇವುಗಳನ್ನು ಮಾಡಲಿಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಏಕ ಪಕ್ಷೀಯ ನಿರ್ಧಾರವನ್ನು ಕೈಕೊಳ್ಳುತ್ತಿದ್ದರು ಎಂದು ಹಿಂದಿನ ಅಧ್ಯಕ್ಷರ ಕಾರ್ಯನಿರ್ವಹಣೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದರು.

ಬೆಳಗಾವಿ ತಾಲ್ಲೂಕು ಮೂರು ಭಾಗಗಳಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ. ಎರಡೂ ಭಾಷಿಕರು, ಮತ್ತು ಯಮಕನಮರ್ಡಿ ಕ್ಷೇತ್ರಗಳನ್ನು ಒಳಗೊಂಡು ದೊಡ್ಡದಾದ ತಾಲ್ಲೂಕನ್ನು ಹೊಂದಿದೆ. ಬೆಳಗಾವಿ ತಾಲ್ಲೂಕಿನ ರೈತರಿಗೆ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಸಿಗಬೇಕಿರುವ ವಿವಿಧ ಯೋಜನೆಗಳನ್ನು ನೀಡಬೇಕಿದೆ.ಈ ನಿಟ್ಟಿನಲ್ಲಿ ರಾಹುಲ್ ಜಾರಕಿಹೊಳಿಯವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮಾರ್ಗದರ್ಶನದಲ್ಲಿ
ಈ ತಾಲ್ಲೂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲ ಪಿಕೆಪಿಎಸ್ ಸಂಘಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಇದರ ಜೊತೆಗೆ ಮತ್ತೊಂದು ಜವಾಬ್ದಾರಿ ರಾಹುಲ್ ಹೆಗಲಿನ ಬಿದ್ದಿದೆ. ಬ್ಯಾಂಕಿನಿಂದ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇದಕ್ಕೆ ಬೆಳಗಾವಿ ತಾಲ್ಲೂಕಿನ ಎಲ್ಲ ಸಹಕಾರಿ ಸಂಘಗಳು ಮತ್ತು ರೈತರೇ ಕಾರಣರಾಗಿದ್ದಾರೆ. ರಾಹುಲ ಜಾರಕಿಹೊಳಿಯವರು ಸಮಾಧಾನದ ವ್ಯಕ್ತಿಯಾಗಿದ್ದಾರೆ. ಸರಳತೆಯನ್ನು ಮೈಗೂಡಿಸಿಕೊಂಡಿದ್ದು, ರೈತರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಹೊಂದಿದ್ದಾರೆ. ಯಾವ ಕಾರಣಕ್ಕೂ ಹೆದರಬೇಡಿ. ರಾಹುಲ್ ನಿಮ್ಮೊಂದಿಗೆ ಬೆರೆಯುವ ವ್ಯಕ್ತಿ. ಏನೇ ಸಮಸ್ಯೆಗಳಿದ್ದರೂ ಅವರ ಬಳಿ ಮಾತನಾಡಿ. ನಿಮ್ಮಗಳ ಸಮಸ್ಯೆಗಳಿಗೆ ಪರಿಹಾರಗಳನ್ನು ದೊರಕಿಸಿಕೊಡುತ್ತಾರೆ. ರಾಹುಲ್ ಜಾರಕಿಹೊಳಿಯವರೊಂದಿಗೆ ಹೇಗೆ ಮಾತನಾಡಬೇಕು ಎಂಬ ಅಳುಕವನ್ನು ಯಾರೂ ಮಾಡಿಕೊಳ್ಳಬಾರದು. ಚಿಕ್ಯ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಗಳನ್ನು ರಾಹುಲ್ ಅವರು ಹೊತ್ತುಕೊಂಡಿದ್ದು, ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕಿನ ಕೊಂಡಿಯಂತೆ ಅವರು ಕೆಲಸ ಮಾಡುವರು ಎಂದು ಬಾಲಚಂದ್ರ ಜಾರಕಿಹೊಳಿಯವರು ರಾಹುಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಬ್ಯಾಂಕಿನ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಮಾತನಾಡಿ, ಬ್ಯಾಂಕಿನ ಮುಂದಿನ ರೈತಪರ ಯೋಜನೆಗಳನ್ನು ವಿವರಿಸಿದರು.
ಅಪೆಕ್ಸ್ ಬ್ಯಾಂಕಿನ ನೂತನ ನಿರ್ದೇಶಕ ರಾಹುಲ್ ಜಾರಕಿಹೊಳಿಯವರು ಮಾತನಾಡಿ, ಬೆಳಗಾವಿ ತಾಲ್ಲೂಕುಗಳಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣೀಕರ್ತರಾದ ಸಂಘಗಳಿಗೆ ಕೃತಜ್ಞತೆ ಸೂಚಿಸಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ರೈತರ ಸೇವೆಯನ್ನು ಸಲ್ಲಿಸುತ್ತೇನೆ. ಬ್ಯಾಂಕಿನಿಂದ ಸಿಗುವ ಯೋಜನೆಗಳನ್ನು ರೈತರಿಗೆ ನೀಡುತ್ತೇನೆ. ಈ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿಗೆ ಬದ್ಧನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ವಿಪ ಸದಸ್ಯ ಮತ್ತು ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ನಿರ್ದೇಶಕ ಮಂಡಳಿ ಸದಸ್ಯರು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ, ಉಪ- ಪ್ರಧಾನ ವ್ಯವಸ್ಥಾಪಕ ಎಸ್.ಬಿ.ಬಾಗೇವಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ತಾಲ್ಲೂಕಿನ ವಿ.ಪ್ರಾ.ಗ್ರಾ.ಕೃ.ಸಹಕಾರ ಸಂಘಗಳ ಎಲ್ಲ ಸದಸ್ಯರು ಮತ್ತು ಬ್ಯಾಂಕಿನ ಸರ್ವ ಸಿಬ್ಬಂದಿಯವರು ಈ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡಿದ್ದರು.
IN MUDALGI Latest Kannada News