ಕುಲಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಬಸಪ್ಪ ಕ್ವಾನ್ಯಾಗೋಳ ಪಿಎಸ್‍ಐ ಹುದ್ದೆಗೆ ಆಯ್ಕೆ
ಬೆಟಗೇರಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯಲ್ಲಿ ಸುಮಾರು 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪೇದೆ ಬಸಪ್ಪ ದ್ಯಾವಪ್ಪ ಕ್ವಾನ್ಯಾಗೋಳ ಅವರು ಈಗ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮೂಲತ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದವರಾದ ಬಸಪ್ಪ ಕ್ವಾನ್ಯಾಗೋಳ ಅವರು ಕೃಷಿಕ ಕುಟುಂಬದ ದೊಡ್ಡ ಪರಿವಾರದಲ್ಲಿ ಜನಸಿದ ಅವರು, ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಓದನ್ನು ಮುಂದುವರಿಸಿಕೊಂಡು ಬಂದವರು. ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಾ, ಪೊಲೀಸ್ ಸಬ್ ಇನ್ಸಪೆಕ್ಟರ್ ಆಗುವ ಕನಸು ಹೊತ್ತು, ಹೆಚ್ಚಿನ ವ್ಯಾಸಂಗ ಮಾಡಿ ಪಿಎಸ್‍ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 213 ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಿಎಸ್‍ಐ ಹುದ್ದೆಗೆ ಆಯ್ಕೆಗೊಂಡಿದ್ದಾರೆ.
ಪೊಲೀಸ್ ಪೇದೆ ಬಸಪ್ಪ ಅವರು 2017ರಲ್ಲಿ ಹುದ್ದೆಗೆ ಪ್ರಯತ್ನಿಸಿ, ಛಲ ಬಿಡದೇ ಸತತ ನಾಲ್ಕು ವರ್ಷಗಳ ಪರಿಶ್ರಮದ ಅಧ್ಯಯನದ ಫಲವಾಗಿ ಮತ್ತು ಅಣ್ಣನ ಹಾಗೂ ಪರಿವಾರದ ಎಲ್ಲ ಸದಸ್ಯರ ಸಹಾಯ, ಸಹಕಾರದಿಂದ ಪಿಎಸ್‍ಐ ಹುದ್ದೆಗೆ ಆಯ್ಕೆಗೊಂಡಿದ್ದೇನೆ ಎಂದು ನೂತನ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಆಯ್ಕೆಯಾದ ಬಸಪ್ಪ ಅವರು ಮನೆಯವರ ಸಹಕಾರವನ್ನು ಈ ವೇಳೆ ಸ್ಮರಿಸುತ್ತಾರೆ.
ಅಲ್ಲದೇ ಮಹಾಲಿಂಗಪುರದ ಎಸ್‍ಸಿಪಿ ಸಂಸ್ಥೆಯ ಕೆಎಎಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ. ಪಿಯುಸಿ ವ್ಯಾಸಂಗ ಮಾಡುವಾಗ ಉಪನ್ಯಾಸಕರ ಸಲಹೆಯಂತೆ ಪಿಎಸ್.ಐ ಹುದ್ದೆಗೆ ಸಂಬಂಧಿಸಿದ ಪಠ್ಯಗಳನ್ನು ಅಭ್ಯಸಿಸಲು ಆರಂಭಿಸಿದೆ. ಹೀಗಾಗಿ ಈ ಹುದ್ದೆ ಪಡೆಯಲು ನನಗೆ ಸಹಾಯಕವಾಯಿತು ಎಂದು ನೂತನವಾಗಿ ಪಿಎಸ್‍ಐ ಆಗಿ ಆಯ್ಕೆಗೊಂಡ ಬಸಪ್ಪ ಕ್ವಾನ್ಯಾಗೋಳ ಅವರು ಅಂದಿನ ದಿನಗಳಲ್ಲಿ ಸಲಹೆ, ಸಹಕಾರ ನೀಡಿದವರನ್ನು ಸಹ ನೆನೆಯುತ್ತಾರೆ.
ಕುಲಗೋಡ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪೇದೆ ಬಸಪ್ಪ ದ್ಯಾವಪ್ಪ ಕ್ವಾನ್ಯಾಗೋಳ ಅವರು ಈಗ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದಕ್ಕೆ ಹುಟ್ಟೂರೂ ಬೆಳಗಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಗೆಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.