ನಿವೃತ್ತ ಸೈನಿಕ ರವಿ ದೇಯಣ್ಣವರಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
ಬೆಟಗೇರಿ:ನಿವೃತ್ತಿ ಹೊಂದಿದ ಯೋಧ ರವಿ ಈರಸಂಗಪ್ಪ ದೇಯಣ್ಣವರ ಮಾ.3ರಂದು ಹುಟ್ಟೂರು ಬೆಟಗೇರಿ ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ, ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಅಶ್ವಾರೂಢ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಭಾರತಾಂಬೆಯ ಮೂರ್ತಿ ತನಕ ಸಕಲ ವಾದ್ಯಮೇಳಗಳೊಂದಿಗೆ ನಿವೃತ್ತಿ ಹೊಂದಿದ ಯೋಧ ರವಿ ದೇಯಣ್ಣವರ ಭವ್ಯ ಸ್ವಾಗತ ಮೆರವಣಿಗೆ, ಭಾರತಾಂಬೆಯ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ ನಡೆದ ಬಳಿಕ ನಿವೃತ್ತಿ ಹೊಂದಿದ ಯೋಧ ರವಿ ದೇಯಣ್ಣವರ ದಂಪತಿಗೆ ಸನ್ಮಾನ, ಸಿಹಿ ವಿತರಣೆ ಕಾರ್ಯಕ್ರಮ ಜರುಗಿತು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ,
ಪ್ರತಿಯೊಬ್ಬರೂ ದೇಶ ಪ್ರೇಮ, ಭಕ್ತಿ ಮೈಗೊಡಿಸಿಕೊಳ್ಳಬೇಕು. ದೇಶ ರಕ್ಷಣೆಯಲ್ಲಿ ಯೋಧರ ತ್ಯಾಗ, ಬಲಿದಾನ ಅವಿಸ್ಮರಣೀಯವಾಗಿದೆ ಎಂದರು. ವಿಜಯ ಹಿರೇಮಠ ಸಾನಿಧ್ಯ, ಸುರೇಶ ವಡೇರ ಸಮ್ಮುಖ ವಹಿಸಿದ್ದರು.
ನಿವೃತ್ತ ಸೈನಿಕ ರವಿ ದೇಯಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಸಿಗುವ ಸಂತೋಷ ಯಾವ ವೃತ್ತಿಯಲ್ಲಿ ದೊರಕುವುದಿಲ್ಲಾ, ನಿಮ್ಮೆಲ್ಲರ ಸ್ವಾಗತ ಗೌರವದಿಂದ ನನ್ನ 24 ವರ್ಷಗಳ ಸೈನಿಕ ವೃತ್ತಿ ಬದುಕು ಸಾರ್ಥಕವಾಯಿತು ಎಂದರು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ನೇಹಿತರು, ಸ್ಥಳೀಯ ಹಾಲಿ ಮತ್ತು ನಿವೃತ್ತ ಸೈನಿಕರ ಬಳಗದ ಪದಾಧಿಕಾರಿಗಳು, ಸದಸ್ಯರು, ಯುವಕರು, ಎಸ್‍ಎಸ್‍ವೈ ಪಿಯು ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಸದಸ್ಯರು, ವಿವಿಡಿಸಪ್ರೌ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.