ಬೆಟಗೇರಿ: ಮಾರುತಿ ದೇವರು ಇಲ್ಲದ ಊರಿಲ್ಲ, ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಮೇ.14ರಂದು ನಡೆದ ಬೆಳಗಾವಿ ಲೋಕಸಭಾ ಮಾಜಿ ಸದಸ್ಯ ದಿ.ಸುರೇಶ ಅಂಗಡಿ ಅವರ ಅನುದಾನದಡಿಯಲ್ಲಿ ನಿರ್ಮಿಸಿರುವ ಬೆಟಗೇರಿ ಗ್ರಾಮದ ಶ್ರೀ ಮಾರುತಿ ದೇವರ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ದಾನಿಗಳಿಗೆ, ಗಣ್ಯರಿಗೆ ಸತ್ಕಾರ, ಮಹಾಪ್ರಸಾದ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿ ದೀಪ ಪ್ರಜ್ವಲಿಸಿ ಅವರು ಮಾತನಾಡಿದರು.
ಮಾರುತಿ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ. ಸ್ಥಳೀಯ ಹನುಮಂತ ದೇವರ ನೂತನ ದೇವಾಲಯ ನಿರ್ಮಾಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಇಲ್ಲಿಯ ವಿವಿಧ ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ತನು, ಮನ, ಧನ ಪೂರಕ ನೀಡುತ್ತಿರುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮುಖ್ಯಅತಿಥಿಗಳಾಗಿ ಮಾತನಾಡಿ, ಭಾರತ ಭವ್ಯ ಪರಂಪರೆ, ವೈಶೀಷ್ಟಪೂರ್ಣ ಹಾಗೂ ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದೆ. ಶ್ರೀರಾಮನ ಮೇಲೆ ಹನುಮಂತನು ಅಪಾರ ಭಕ್ತಿಯುಳ್ಳನಾಗಿದ್ದನು. ಅವ್ಯಕ್ತ ಶಕ್ತಿಯೊಂದು ಇದ್ದುದರಿಂದ ಜಗತ್ತಿನಲ್ಲಿ ಎಲ್ಲಾ ಕ್ರಿಯೆಗಳು ನಡೆಯುತ್ತಿವೆ. ಮೊದಲಿನಿಂದಲೂ ಸತ್ಯ ಮತ್ತು ಅಸತ್ಯಕ್ಕೆ ಸಂಘರ್ಷ ನಡೆಯುತ್ತಾ ಬಂದಿದೆ. ಆದರೆ ಕೊನೆಗೆ ಸತ್ಯಕ್ಕೆ ಜಯ ಸಿಕ್ಕಿದೆÉ. ಮಾಜಿ ಎಮ್‍ಪಿ ದಿ.ಸುರೇಶ ಅಂಗಡಿ ಅವರು ಲೋಕಸಭಾ ಮತಕ್ಷೇತ್ರದ ವಿವಿಧ ವಲಯದಲ್ಲಿ ಅಭಿವೃದ್ಧಿ ಪರ ಕೈಗೊಂಡ ಕಾರ್ಯಗಳನ್ನು ಮತ್ತು ಸ್ಥಳೀಯ ಮಾರುತಿ ದೇವರ ನೂತನ ಮಂದಿರ ನಿರ್ಮಾಣದಲ್ಲಿ ಜಿಪಂ ಮಾಜಿ ಸದಸ್ಯ ದಿ.ವಾಸುದೇವ ಸವತಿಕಾಯಿ ಸಲ್ಲಿಸಿದ ಸೇವೆಯನ್ನು ಈ ವೇಳೆ ಸ್ಮರಿಸಿದರು.
ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅಧ್ಯಕ್ಷತೆ, ಕಡಕೋಳದ ಅಭಿನವ ಸಿದ್ರಾಯಜ್ಜನವರು, ಮನ್ನಿಕೇರಿ ವಿಜಯ ಮಹಾಂತೇಶ್ವರ ಸ್ವಾಮಿಜಿ ಸಮ್ಮುಖ ವಹಿಸಿದ್ದರು. ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬೆಟಗೇರಿ ಗ್ರಾಮದ ಮಾರುತಿ ದೇವರ ನೂತನ ದೇವಾಲಯ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ, ಸಂಭ್ರಮದಿಂದ ನಡೆದವು. ಸಮಾರಂಭದಲ್ಲಿ ಶ್ರೀಗಳಿಗೆ, ದಾನಿಗಳಿಗೆ, ಗಣ್ಯರಿಗೆ ಸತ್ಕಾರ ನಡೆದ ಬಳಿಕ ಮಹಾಪ್ರಸಾದ ಜರುಗಿತು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆ, ಯುವಕ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ತಾಪಂ, ಗ್ರಾಪಂ ಹಾಲಿ ಮತ್ತು ಮಾಜಿ ಸದಸ್ಯರು, ಹಿರಿಯ ನಾಗರಿಕರು, ಗಣ್ಯರು, ಭಕ್ತರು ಇಲ್ಲಿಯ ಮಾರುತಿ ದೇವರ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದ ಆಯೋಜಕ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು. ಸ್ಥಳಿಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.