ನಮ್ಮೆಲ್ಲರಿಗೂ ಹಸಿರೇ ಉಸಿರಾಗಿದೆ: ದೇವರಾಜ್.ಎಂ
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳೆಸಲು ಮುಂದಾಗಬೇಕು. ನಮ್ಮೆಲ್ಲರಿಗೂ ಹಸಿರೇ ಉಸಿರಾಗಿದೆ ಎಂದು ಮೂಡಲಗಿ ಕೇಂದ್ರದ ಶ್ರೀಕ್ಷೇಧಗ್ರಾಯೋ ಬಿಸಿ ಟ್ರಸ್ಟ್ ಯೋಜನಾಧಿಕಾರಿ ದೇವರಾಜ್.ಎಂ ಹೇಳಿದರು.
ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ಜು.12ರಂದು ನಡೆದ ಪರಿಸರ ಜಾಗೃತಿ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿ, ಸಸಿ ನೆಟ್ಟು, ಪೊಷಿಸಿ, ಬೆಳೆಸುವುದರ ಮೂಲಕ ಈ ಬಯಲು ಸೀಮೆ ನಾಡನ್ನು ಹಚ್ಚ ಹಸಿರಿನ ಮಲೆನಾಡಾಗಿಸಲು ಪ್ರಯತ್ನಿಸಬೇಕು ಎಂದರು.
ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲನ್ನವರ ಉದ್ಘಾಟಕರಾಗಿ ಜ್ಯೋತಿ ಪ್ರಜ್ವಲಿಸಿದ ಬಳಿಕ ಸಸಿ ನೆಟ್ಟು, ನೀರು ಹಾಕಿದರು. ಶ್ರೀಕ್ಷೇಧಗ್ರಾಯೋ ಕೃಷಿ ಮೇಲ್ವಿಚಾರಕ ಈರಣ್ಣ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಅಧ್ಯಕ್ಷತೆ ವಹಿಸಿದರು. ಪರಿಸರ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಹಲವಾರು ಸಸಿಗಳನ್ನು ನೆಡಲಾಯಿತು.
ಕೌಜಲಗಿ ವಲಯದ ಮೇಲ್ವಿಚಾರಕ ಗುರುರಾಜ ಹಾದಿಮನಿ, ಭಾಸ್ಕರ್‍ಜಿ., ಆರ್.ಬಿ.ಬೆಟಗೇರಿ, ಎಸ್.ಬಿ.ಸನದಿ, ಜಿ.ಎಮ್.ಕಮತ, ರಾಮಣ್ಣ ನೀಲಣ್ಣವರ, ದುಂಡಪ್ಪ ಕಂಬಿ, ಮಧು ತಲ್ಲೂರ, ಬಸವರಾಜ ಕರಿಗಾರ, ಮಾರುತಿ ನೀಲನ್ನವರ, ಶ್ರೀಕ್ಷೇಧಗ್ರಾಯೋ ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘ ಹಾಗೂ ಪ್ರತಿ ಬಂಧು ಒಕ್ಕೂಟ ಅಧ್ಯಕ್ಷರು, ಸದಸ್ಯರು, ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.