ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುವ ಮದುವೆ, ಮುಂಜೆ, ಮನೆಗಳಲ್ಲಿ ಜರುಗುವ ವಿವಿಧ ಸಭೆ, ಸಮಾರಂಭಗಳಲ್ಲಿ ತಪ್ಪದೇ ಹಾಜರಾಗಿ ಜನಪದ ಹಾಡುಗಳನ್ನು ಹಾಡುತ್ತಾ, ನಾಡಿನ ಜನಪದ, ಕಲೆ, ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಇಂದಿನ ಪೀಳಿಗೆಗಳಲ್ಲಿ ಜನಪದ ಹಾಡುಗಳನ್ನು ಪರಿಚಯಿಸುತ್ತಾ ಬಂದಿರುವ ಬೆಟಗೇರಿ ಗ್ರಾಮದ ಕ್ಷತ್ರೀಯ ಸಮಾಜದ ಹಿರಿಯ ಜೀವಿ, ಸೋಬಾನ ಪದಗಳ ಹಾಡುಗಾರ್ತಿ, ಸ್ಥಳೀಯ ಜನಪದ ಹಾಡುಗಳ ಗಾನಕೋಗಿಲೆ ಕಾಶವ್ವ ಭರಮಪ್ಪ ಪೂಜೇರಿ(90)ಅವರು ಆ.21ರಂದು ನಿಧನರಾದರು.
ಮೃತರು ಸ್ಥಳೀಯ ಶ್ರೀ ಲಕ್ಷ್ಮೀದೇವಿ ದೇವಾಲಯದ ಅರ್ಚಕರಾದ ನಿಂಗಪ್ಪ ಭರಮಪ್ಪ ಪೂಜೇರಿ ಸೇರಿದಂತೆ ಓರ್ವ ಪುತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನಗಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹಿರಿಯರ ಸಂತಾಪ:ಬೆಟಗೇರಿ ಗ್ರಾಮದ ಜನಪದ ಹಾಡುಗಳ ಗಾನಕೋಗಿಲೆ ಎಂದು ಹೆಸರಾದ ಕಾಶವ್ವ ಪೂಜೇರಿ ಅವರು ನಿಧನರಾದ ಹಿನ್ನಲೆಯಲ್ಲಿ ಸ್ಥಳೀಯ ಕಾರ್ಯಕ್ರಮ ನಿರೂಪಕ ಬಸವರಾಜ ಪಣದಿ ಮಾತನಾಡಿ, ಕಾಶವ್ವ ಪೂಜೇರಿ ನಿಧನದಿಂದ ಸ್ಥಳೀಯರಿಗೆ ಹಾಗೂ ಜನಪದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸ್ಥಳೀಯ ಜನಪದ ಹಾಡುಗಳ ಹಾಡುಗಾರ್ತಿಯರ ಜೋಡಿಯ ಒಂದು ಅತ್ಯಂತ ಮಹತ್ವದ ಕೊಂಡಿ ಕಳಚಿದಂತಾಗಿದೆ ಎಂದರು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹಿರಿಯ ನಾಗರಿಕರು, ಗಣ್ಯರು, ವಿವಿಧ ಕ್ಷೇತ್ರದ ಕಲಾವಿದರು, ಸ್ಥಳೀಯರು ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.