ಬೆಟಗೇರಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಸಾಂವಕ್ಕಾ ಬಾಣಸಿ, ಉಪಾಧ್ಯಕ್ಷರಾಗಿ ಶಿವನಪ್ಪ ಮಾಳೇದ ಆಯ್ಕೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೆ.17ರಂದು ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು.
ಬೆಟಗೇರಿ ಗ್ರಾಮ ಪಂಚಾಯತಿ ಒಟ್ಟು 13 ಜನ ಗ್ರಾಪಂ ಸದಸ್ಯರಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾಗಿದ್ದ ಇಲ್ಲಿಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿ ನೇರಾನೇರ ಚುನಾವಣೆ ನಡೆದು ಸಾಂವಕ್ಕ ಸಿದ್ದಪ್ಪ ಬಾಣಸಿ 7 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಮಹಾದೇವಿ ಸಿದ್ದಪ್ಪ ಬಳಿಗಾರ 4 ಮತ ಪಡೆದು ಪರಾಭವಗೊಂಡಿದ್ದಾರೆ. 2 ಮತಗಳು ಅಸಿಂಧುಗೊಂಡಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಚೀಟಿ ಎತ್ತುವ ಮೂಲಕ ಆಯ್ಕೆ..!: ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಇಲ್ಲಿಯ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 3 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಬ್ಬ ಅಭ್ಯರ್ಥಿ ಈಶ್ವರ ಶಿವಪುತ್ರಪ್ಪ ಮುಧೋಳ ನಾಮಪತ್ರ ಹಿಂಪಡೆದಿದ್ದರಿಂದ ಇಬ್ಬರು ಅಭ್ಯರ್ಥಿಗಳಲ್ಲಿ ನೇರಾನೇರ ಚುನಾವಣೆ ಸ್ಪರ್ಧೆ ನಡೆದು ಅಭ್ಯರ್ಥಿ ಅಶೋಕ ಪರಮಾನಂದ ಕೋಣಿಗೆ 6 ಮತ, ಶಿವನಪ್ಪ ಬಸಪ್ಪ ಮಾಳೇದಗೆ 6 ಮತ ಪಡೆದಿದ್ದರಿಂದ ಇಬ್ಬರೂ ಅಭ್ಯರ್ಥಿಗಳಿಗೆ ಸಮಬಲದ ಮತಗಳು ಬಂದು ಕೆಲ ಹೊತ್ತು ಎಲ್ಲರಲ್ಲಿ ಕುತುಹಲ ಉಂಟಾದ ಬಳಿಕ ಚುನಾವಣಾ ನಿಯಮದಂತೆÉ ಚೀಟಿ ಎತ್ತುವ ಮೂಲಕ ಶಿವನಪ್ಪ ಮಾಳೇದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಕರ್ನಾಟಕ ನೀರಾವರಿ ನಿಗಮ ನಿ, ಜಿಆರ್‍ಬಿಸಿ ಮಮದಾಪೂರದ ಉಪವಿಭಾಗ ನಂ-14ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ಎಸ್.ಪಾಟೀಲ ತಿಳಿಸಿದರು.
ಸ್ಥಳೀಯ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ, ನ್ಯಾಯವಾದಿ ಚಂದ್ರಶೇಖರ ನೀಲಣ್ಣವರ, ಸುಭಾಷ ಕರೆಣ್ಣವರ, ಶ್ರೀಧರ ದೇಯಣ್ಣವರ, ಈರಣ್ಣ ಬಳಿಗಾರ, ಲಕ್ಕಪ್ಪ ಚಂದರಗಿ, ಮಾರುತಿ ಚಂದರಗಿ, ಸಿದ್ದಪ್ಪ ವಡೇರ, ಸುಭಾಷ ಜಂಬಗಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ರಾಜಕೀಯ ಮುಖಂಡರು, ಗಣ್ಯರು, ಗ್ರಾಮಸ್ಥರು ಇದ್ದರು.
ವಿಜಯೋತ್ಸವ:ಸ್ಥಳೀಯ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರು ಒಬ್ಬರಿಗೊಬ್ಬರೂ ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.