2ಎ ಮೀಸಲಾತಿಯಿಂದ ಲಿಂಗಾಯತ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ:ಬಸವ ಜಯ ಮೃತ್ಯುಂಜಯ ಶ್ರೀಗಳು
ಬೆಟಗೇರಿ: ಶಿಕ್ಷಣ ಮತ್ತು ಉದ್ಯೋಗ ಹಿತದೃಷ್ಠಿಯಿಂದ ಪಂಚಮಸಾಲಿ ಲಿಂಗಾಯತರನ್ನು 2ಎ ವರ್ಗದಲ್ಲಿ ಸೇರ್ಪಡೆ ಮಾಡಲು ಹೋರಾಟ ನಿರಂತರವಾಗಿದ್ದು, ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ 2ಎ ಮಿಸಲಾತಿಯಿಂದ ಉಜ್ವಲ ಭವಿಷ್ಯವಿದೆ ಎಂದು ಕೂಡಲಸಂಗಮ ಧರ್ಮಕ್ಷೇತ್ರದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಸ್ಥಳೀಯ ಶ್ರೀ ಗಜಾನನ ವೇದಿಕೆಯಲ್ಲಿ ಸೆ.30ರಂದು ನಡೆದ 2ಎ ಮೀಸಲಾತಿಗಾಗಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಪಂಚ ಹಂತದ ಚಳುವಳಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಈಗಾಗಲೇ ಸಾಕಷ್ಟು ಹೋರಾಟ ಮಾಡುತ್ತಾ ಬಂದಿದ್ದೇವೆ. ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಪಂಚಮಸಾಲಿ ವರ್ಗದವರನ್ನು 2ಎ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡಿಸಲು ಭರವಸೆ ನೀಡಿದ್ದಾರೆ. ಆದರೂ ನಮ್ಮ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗುವವರೆಗೂ ನಾವು ನಿರಂತರವಾಗಿ ಹೋರಾಟ ಮುಂದುವರೆಸುತ್ತೇವೆ ಎಂದರು.
ಲಿಂಗಾಯತ ಪಂಚಮಸಾಲಿ2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಲು ಸಮಾಜ ಬಾಂಧವರು ಬೆಂಬಲ ನೀಡಬೇಕು, ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಅ.7ರಂದು ಕಲ್ಲೋಳಿ ಪಟ್ಟಣದಲ್ಲಿ ತಾಲೂಕಾ ಮಟ್ಟದ ಬೃಹತ್ ಪಂಚಮಸಾಲಿ ಸಮಾಜದ ಸಮಾವೇಶ ಜರುಗಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮ ಧರ್ಮಕ್ಷೇತ್ರದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಕರೆ ನೀಡಿದರು.
ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, 2ಎ ಮೀಸಲಾತಿಯಿಂದ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ದೊರಕುವ ವಿವಿಧ ಸಹಾಯ, ಸೌಲಭ್ಯಗಳು, ಸಮಾಜದ ಸಂಘಟನೆ ಮತ್ತು ಮೀಸಲಾತಿ ಪಡೆಯಲು ಸಮಾಜ ಮಾಡುತ್ತಿರುವ ಹಲವಾರು ಹೋರಾಟ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭರವಸೆಗಳ ಕುರಿತು ತಿಳಿಸಿದರು.
ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಬೆಟಗೇರಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಶ್ರೀಗಳು ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ ಪ್ರತಿಜ್ಞಾ ಪಂಚಾಯತ ವಿಧಿ ಬೋಧಿಸಿದರು.
ಮೂಡಲಗಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಘಟಕದ ತಾಲೂಕಾಧ್ಯಕ್ಷ ಬಿ.ಐ.ಪಾಟೀಲ, ಯುವ ಘಟಕಾಧ್ಯಕ್ಷ ಸಂಗಮೇಶ ಕೌಜಲಗಿ, ಮೀಸಲಾತಿ ಹಕ್ಕೊತ್ತಾಯ ಸಮಿತಿ ಅಧ್ಯಕ್ಷ ಮಲ್ಲು ಗೋಡಿಗೌಡರ, ದೀಪಕ ಜುಂಜರವಾಡ, ಕಲ್ಮೇಶ್ ಗೋಕಾಕ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ನ್ಯಾಯವಾದಿ ಎಂ.ಐ.ನೀಲಣ್ಣವರ, ಶ್ರೀಧರ ದೇಯಣ್ಣವರ, ರಮೇಶ ಮುಧೋಳ, ಈರಪ್ಪ ದೇಯಣ್ಣವರ, ಬಸವರಾಜ ಮಾಳೇದ, ಈರಣ್ಣ ಸಿದ್ನಾಳ, ಈರಣ್ಣ ಬಳಿಗಾರ, ಶಿವು ದೇಯಣ್ಣವರ, ಬಸವರಾಜ ಪಣದಿ, ಮುತ್ತೆಪ್ಪ ನೀಲಣ್ಣವರ, ಗುಳಪ್ಪ ಪಣದಿ, ಮಲ್ಲಿಕಾರ್ಜುನ ನೀಲಣ್ಣವರ, ಸ್ಥಳೀಯ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು, ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು, ಇತರರು ಇದ್ದರು.