ಕೆಎಲ್‍ಇ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು: ಜಯಾನಂದ ಮುನವಳ್ಳಿ
ಬೆಟಗೇರಿ:ಕೆ.ಎಲ್.ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಖ್ಯಾತ ವೈದ್ಯರು ವಿವಿಧ ರೋಗಗಳ ಕುರಿತು ಉಚಿತ ತಪಾಸಣೆ ಮಾಡಿ ಔಷಧಿಗಳನ್ನು ನೀಡಿ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾರೆ. ಸಾರ್ವಜನಿಕ ರೋಗಿಗಳು ಕೆ.ಎಲ್.ಇ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗೋಕಾಕ ಕೆ.ಎಲ್.ಇ ಸಂಸ್ಥೆಯ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಚಿಕ್ಕ ಮಕ್ಕಳ, ಗರ್ಭಿಣಿಯರ ಮತ್ತು ಸ್ತ್ರೀರೋಗ, ದಂತ(ಹಲ್ಲಿನ), ಎಲುಬು-ಕೀಲು ಹಾಗೂ ನೇತ್ರ(ಕಣ್ಣು)ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಮಮದಾಪೂರ ಗ್ರಾಮಕ್ಕೆ ಕೆ.ಎಲ್.ಇ ಸಂಸ್ಥೆಯ ವತಿಯಿಂದ ಶಾಲೆ ತೆರದು ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವದು ಎಂದರು.
ಮಮದಾಪೂರ ಪಿಕೆಪಿಎಸ್ ಸಂಘದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಮದಾಪೂರ ಮತ್ತು ಸುತ್ತಲಿನ ಹಳ್ಳಿಗಳ ಸುಮಾರು 630ಕ್ಕೂ ಹೆಚ್ಚು ಜನರ ವಿವಿಧ ರೋಗಗಳ ರೋಗಿಗಳನ್ನು ತಜ್ಞವೈದ್ಯರಿಂದ ಸಮಗ್ರ ಉಚಿತ ತಪಾಸಣೆ ಮಾಡಿ ಮತ್ತು ಸೂಕ್ತ ಸಲಹೆ ಹಾಗೂ ಔಷಧೋಪಚಾರ ನೀಡಲಾಯಿತು. 160 ಜನ ರೋಗಿಗಳ ನೇತ್ರ ತಪಾಸಣೆ ಮಾಡಿ ಅದರಲ್ಲಿ ಅವಶ್ಯಕ 60 ಜನ ಕಣ್ಣಿನ ಸಮಸ್ಯೆಗಳಿರುವ ರೋಗಿಗಳಿಗೆ ಕೆ.ಎಲ್.ಇ ಆಸ್ಪತ್ರೆಯ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗುವುದು ಎಂದು ಗೋಕಾಕ ಕೆ.ಎಲ್.ಇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಧರೆಪ್ಪ ಚೌಗಲಾ ತಿಳಿಸಿದ್ದಾರೆ.
ಮಮದಾಪೂರದ ಚರಮೂರ್ತೇಶ್ವರ ಸ್ವಾಮಿಜಿ, ಗ್ರಾಪಂ ಅಧ್ಯಕ್ಷ ರಮೇಶ ಗಾಣಗಿ, ಡಾ.ಜ್ಯೋತಿ ಚೌಗಲಾ, ಡಾ.ಶುಭಂ ಹುಕ್ಕೇರಿ, ಡಾ.ಅರುಣ ವಣ್ಣೂರ, ಡಾ.ಪ್ರೀಯಾ ಹೊಂಗಲ, ಡಾ.ಜ್ಯೋತಿ ಯತ್ತಿನಮನಿ, ಲಕ್ಷ್ಮಣ ದಳವಾಯಿ, ಮುಬಾರಕ ಅತ್ತಾರ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಮಮದಾಪೂರ ಪಿಕೆಪಿಎಸ್ ಸಂಘದ ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಾಹಕರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.