ಬೆಟಗೇರಿ ಸುತ್ತಮುತ್ತ ಸುರಿದ ಮಳೆಯಿಂದ ಬೆಳೆ ನಾಶವಾಗುವ ಆತಂಕದಲ್ಲಿ ರೈತರು.!
ತುಂಬಿ ಹರಿದ ಬೆಟಗೇರಿ ಹಳ್ಳ
ಮಳೆಗೆ ಕುಸಿದು ಬಿದ್ದ ಕೆಲ ಮನೆಯ ಮೇಲಚ್ಛಾವಣಿ, ಗೋಡೆಗಳು
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರದಂದು ಮುಂಜಾನೆ ಮತ್ತು ಮಧ್ಯಾಹ್ನ ಭಾರಿ ಪ್ರಮಾಣದ ಮಳೆಯಾಗಿದ್ದರಿಂದ ಬೆಟಗೇರಿ ಗ್ರಾಮದ ಪಕ್ಕದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದೆ.
ಕಳೆದ ನಾಲ್ಕೈದು ದಿನಗಳಿಂದ ಬೆಟಗೇರಿ ಗ್ರಾಮದ ಸುತ್ತ-ಮುತ್ತ ಹಗಲಿರುಳು ಆಗಾಗ ಧಾರಾಕಾರ ಮಳೆ ಧರೆಗಿಳಿಯುತ್ತಿದೆ. ಮಳೆಗೆ ಗ್ರಾಮದಲ್ಲಿರುವ ಪಾಳುಬಿದ್ದ ಮತ್ತು ವಾಸವಿದ್ದ ಮಣ್ಣಿನ ಮೇಲಾಚ್ಛಾವಣೆ ಸೇರಿದಂತೆ ಕೆಲವು ಮನೆಯ ಗೋಡೆಗಳು ಕುಸಿದು ಬಿದ್ದು ಹೋಗಿವೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಕಬ್ಬು, ತರಕಾರಿ ಬೆಳೆಗಳು, ಗೋವಿನಜೋಳ ಸೇರಿದಂತೆ ಭೂಮಿಯಲ್ಲಿದ್ದ ಕೆಲವು ಬೆಳೆಗಳು ನೆಲಕಚ್ಚಿ ಹೋಗಿವೆ. ಹೀಗೆ ಇನ್ನೂ ಕೆಲವು ದಿನ ಮಳೆ ಮುಂದುವರಿದರೆ ಅಳಿದುಳಿದ ಬೆಳೆಗಳು ಸಹ ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.
ಬೆಟಗೇರಿ ಗ್ರಾಮದ ಪಕ್ಕದಲ್ಲಿರುವ ಯರವಂಕಿ ತೋಟಪಟ್ಟಿ ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಹಳ್ಳದ ಸೇತುವೆ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡು ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ರಸ್ತೆ ಮೇಲೆ ನಿತ್ಯ ಸಂಚರಿಸುವ ಯರವಂಕಿ ಹಾದಿಯ ತೋಟಪಟ್ಟಿಯಲ್ಲಿ ವಾಸವಾಗಿರುವ ಜನರು, ರೈತರು ಊರಿನ ಕಡೆ, ತೋಟದ ಕಡೆ ಹೋಗಲು, ಬರಲು ಮಂಗಳವಾರದಂದು ಮಧ್ಯಾಹ್ನದಿಂದ ಸಂಜೆಹೊತ್ತಿನ ತನಕ ಪರದಾಡುವಂತಾಗಿದೆ. ಮಳೆ ನೀರಿನಿಂದ ಗ್ರಾಮದ ಪಕ್ಕದಲ್ಲಿರುವ ಹಳ್ಳ ತುಂಬಿ ಹರಿಯುತ್ತಿರುವದನ್ನು ನೋಡಲು ಸ್ಥಳೀಯರು ಹೋಗುತ್ತಿರುವದು ಸಾಮಾನ್ಯವಾಗಿತ್ತು.