ಬೆಟಗೇರಿ: ಸೈನಿಕರ ಜೀವನ ರಾಷ್ಟ್ರಕ್ಕೆ ಸಮರ್ಪನೆಯಾಗುವಂತಹದು, ಭಾರತೀಯರಾಗಿ ಸೈನಿಕರು ಗಡಿಯಲ್ಲಿ ಹೊರಾಡುತ್ತಾರೆ. ಯೋದರಲ್ಲಿರುವ ದೇಶಪ್ರೇಮ ಮೆಚ್ಚುವಂತಹದಾಗಿದೆ. ಜಾತಿ, ಮತ, ಪಂಥ ತೊರೆದರೇ ಮಾತ್ರ ಅದ್ಬುತ ಸಾಧನೆ, ಕೆಲಸ ಮಾಡಲು ಸಾಧ್ಯ. ನಾವೆಲ್ಲರೂ ಭಾರತಾಂಬೆಯ ಮಕ್ಕಳು, ದೇಶಭಕ್ತರಾಗಿ ರಾಷ್ಟ್ರಕ್ಕೆ ಶಕ್ತಿಯಾಗೋಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಗಿಲ್ ವಿಜಯ ದಿವಸ ಸಂಸ್ಮರಣೆ ಅಂಗವಾಗಿ ಜುಲೈ.26ರಂದು ನಡೆದ ಇಲ್ಲಿಯ ಸೇವಾ ನಿರತ ಮತ್ತು ನಿವೃತ್ತ ಸೈನಿಕರ ಬಳಗದ ವತಿಯಿಂದ ಸುಮಾರು 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಭಾರತಾಂಬೆಯ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪನೆ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸತ್ಕಾರ ಸಮಾರಂಭದಲ್ಲಿ ಭಾರತಾಂಬೆಯ ನೂತನ ವಿಗ್ರಹ ಲೋಕಾರ್ಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಚೀನಾದ ನಾಲ್ಕೈದು ಜನ ಸೈನಿಕರನ್ನು ಹೊಡೆದುರುಳಿಸುವ ಶಕ್ತಿ ಭಾರತ ದೇಶದ ಒಬ್ಬ ಸೈನಿಕನಿಗಿದೆ. ದೇಶ ರಕ್ಷಣೆಯಲ್ಲಿ ಸೈನಿಕ ಮತ್ತು ನೇಗಿಲಯೋಗಿ ದೇಶದ ಎರಡು ಕಣ್ಣುಗಳಿದಂತೆ. ಕಾರ್ಗಿಲ್‍ನಲ್ಲಿ ಪ್ರಾಣಕೊಟ್ಟ ವೀರ ಯೋಧರಿಗೆ ನಾವೆಲ್ಲರೂ ಇಂದು ಗೌರವ ಸಮರ್ಪನೆ ಮಾಡಬೇಕಾಗಿದೆ. ಭಾರತಾಂಬೆಯ ಮೂರ್ತಿ ನಿರ್ಮಿಸಿದ ಬೆಟಗೇರಿ ಗ್ರಾಮದ ಸೇವಾ ನಿರತ ಮತ್ತು ನಿವೃತ್ತ ಸೈನಿಕರ ಕಾರ್ಯ ಮೆಚ್ಚುವಂತಹದಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಿಸಿದರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ದಿವ್ಯ ಸಾನಿಧ್ಯ, ಕಟಕೋಳ ಅಭಿನವ ಸಿದ್ರಾಯಜ್ಜನವರು ನೇತೃತ್ವ, ಗೋಕಾಕ ಬಿಇಒ ಜಿ.ಬಿ.ಬಳಿಗಾರ ಮುಖ್ಯತಿಥಿಗಳಾಗಿ, ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕುತುಬುದ್ದಿನ್ ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಭಾರತಾಂಬೆಯ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಕರೊನಾ ನಿರ್ಮೂಲನಾರ್ಥ, ಲೋಕ ಕಲ್ಯಾಣಾರ್ಥ ನವಗ್ರಹ ಹೋಮ, ಗ್ರಾಮದ ಪ್ರಮುಖ ಬೀದಿಯಲ್ಲಿ ಭಾರತಾಂಬೆಯ ಭಾವಚಿತ್ರ ಹಾಗೂ ಸ್ಥಳೀಯ ವಿಶ್ರಾಂತ ಸೈನಿಕರ ಭವ್ಯ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ನಡೆಯಿತು. ಕಾರ್ಗಿಲ್‍ನಲ್ಲಿ ಪ್ರಾಣನೀಡಿದ ವೀರ ಯೋಧರಿಗೆ ಮೌನಾಚರಣೆ ಮೂಲಕ ಗೌರವ ಸಮರ್ಪಿಸಿದ ಬಳಿಕ ಸ್ಥಳೀಯ ನಿವೃತ್ತ ಸೈನಿಕರನ್ನು ಸತ್ಕರಿಸಲಾಯಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸೇವಾನಿರತ ಮತ್ತು ನಿವೃತ್ತ ಸೈನಿಕರು, ಗಣ್ಯರು, ಹಿರಿಯ ನಾಗರಿಕರು, ಪ್ರೌಢ ಶಾಲೆಯ ಶಿಕ್ಷಕರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಇತರರು ಇದ್ದರು. ವಿಶ್ರಾಂತ ಸೈನಿಕ ಮಹಾದೇವ ಹಾದಿಮನಿ ಸ್ವಾಗತಿಸಿದರು. ಮೋಹನ ತುಪ್ಪದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.